ಬೀದರ್: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಗವಾನ ಗೌತಮ ಬುದ್ಧರ ಭಾವಚಿತ್ರಗಳನ್ನು ಮನೆಗಳಲ್ಲಿಟ್ಟು ಪೂಜಿಸಿದರೆ ಸಾಲದು. ಅವರ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತಂದು, ಜಾಗೃತಿ ಮೂಡಿಸಿದಾಗ ಮಾತ್ರ ಬೌದ್ಧ ಧರ್ಮ ಬೆಳೆಯಲು ಸಾಧ್ಯ ಎಂದು ಕಲಬುರಗಿಯ ಪ್ರಗತಿಪರ ಚಿಂತಕ ವಿಠಲ ವಗ್ಗನ್ ಹೇಳಿದರು.
ಡಾ.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ನಿಮಿತ್ತ ಭಾನುವಾರ ಸಂಜೆ ಇಲ್ಲಿ ಏರ್ಪಡಿಸಿದ `ಸ್ವಯಂ ಪ್ರಕಾಶಿತರಾಗುವ ಕಡೆ ನಮ್ಮ ನಡೆ' ಕಾರ್ಯಕ್ರಮದಲ್ಲಿ ವಿಶೇಷ ಭಾಷಣ ಮಂಡಿಸಿ, ಹೆಚ್ಚಿನ ಜನ ಇಂದು ಬಾಬಾಸಾಹೇಬರ ಭಾವಚಿತ್ರ, ಪ್ರತಿಮೆಗಳು ಸ್ಥಾಪಿಸಿ ಪೂಜೆ ಮಾಡುವುದಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಅವರ ಚಿಂತನೆ, ವಿಚಾರ, ಧ್ಯೇಯ, ಮೌಲ್ಯಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೆಜ್ಜೆಯಿಟ್ಟಾಗ ಸಮಾಜದ ಸಮಗ್ರ ವಿಕಾಸ ಸಾಧ್ಯ ಎಂದರು.
ಕಾಲ್೯ ಮಾಕ್ಸ್೯ ವಿಚಾರಗಳು ಜಗತ್ತಿನಾದ್ಯಂತ ಪ್ರಚಾರಕ್ಕಾಗಿ ಅವರ ಅನುಯಾಯಿಗಳು 14 ರಾಷ್ಟ್ರಗಳಿಗೆ ತೆರಳಿ, ಅವರ ಪುಸ್ತಕಗಳ ಮಾರಾಟ ಮಾಡಿದರು. ಅಶೋಕ ಮಹಾರಾಜ ಸಹ ಬುದ್ಧ ಧಮ್ಮ ಪ್ರಚಾರಕ್ಕೆ ತಮ್ಮ ಇಬ್ಬರು ಮಕ್ಕಳನ್ನು ಭಿಕ್ಕುಗಳನ್ನಾಗಿ ಮಾಡಿ ಪ್ರಚಾರಕ್ಕೆ ಕಳುಹಿಸಿದ್ದರು. ಈ ಮಾದರಿ ನಾವೆಲ್ಲರೂ ಬೌದ್ಧ ಧರ್ಮ ಪ್ರಚಾರಕ್ಕೆ ಮುಂದಾಗಬೇಕು. ಸಂವಿಧಾನದ ಆಶಯಗಳನ್ನೆಲ್ಲ ಪರಿಪೂರ್ಣ ಜಾರಿಗೊಳಿಸಿದಾಗ ಮಾತ್ರ ಭಾರತ ವಿಶ್ವ ಗುರುವಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ಬೀದರ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿಠಲದಾಸ ಪ್ಯಾಗೆ, ಕಲಬುರಗಿ ಉಪನ್ಯಾಸಕ ಅನೀಲಕುಮಾರ ಟೆಂಗಳಿ ಮಾತನಾಡಿದರು. ಕಲಾವಿದ ಶಂಕರ ಚೊಂಡಿ ಮತ್ತು ತಂಡ ಹಾಗೂ ಪಂಚಶೀಲ ಕಲಾ ಸಾಹಿತ್ಯ ಪರಿಷತ್ ನಿಂದ ಭೀಮಗೀತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಭಂತೆ ಧಮ್ಮಾನಂದ ಥೇರೋ ಹಾಗೂ ಭಿಕ್ಕು ಸಂಘದ ವಿವಿಧ ಭಂತೆಜಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರನ್ನು ಸನ್ಮಾನಿಸಲಾಯಿತು.
ಆಯೋಜನಾ ಸಮಿತಿ ಪ್ರಮುಖರಾದ ಪ್ರದೀಪ ನಾಟೇಕರ್, ಸೂರ್ಯಕಾಂತ ಸಾದೂರೆ, ವಿನೋದ ರತ್ನಾಕರ್, ಸಂತೋಷ ಭೂರೆ, ವಿಜಯ ರಾಮಬಾಣ, ಶ್ರೀಧರ ಸೋಮನೂರ್, ಕಿಶೋರ ನವಲಸಪುರ, ರಾಜರತನ್ ಸಿಂಧೆ, ಅಮರ ಸಾಗರ, ಪವನ ಮಿಠಾರೆ, ಗೌತಮ ಮುತ್ತಂಗಿಕರ್, ಶಿವಕುಮಾರ ಗೂನಳ್ಳಿಕರ್, ಶಾರದಾ ಆಳಂದಕರ್, ಉಷಾ ಬನಸೂಡೆ, ಇಂದುಮತಿ ಸಾಗರ ಇತರರಿದ್ದರು. ಸಮಿತಿ ಕಾರ್ಯಾಧ್ಯಕ್ಷ ಸಂದೀಪ ಕಾಂಟೆ ಸ್ವಾಗತಿಸಿದರು, ಅಧ್ಯಕ್ಷ ಮಹೇಶ ಗೋರನಾಳಕರ್ ಪ್ರಾಸ್ತಾವಿಕ ಮಾತನಾಡಿದರು. ಗೌರವಾಧ್ಯಕ್ಷ ವಿನಯ್ ಮಾಳಗೆ ವಂದಿಸಿದರು.
ಭಗವಾನ್ ಬುದ್ಧ, ಅಂಬೇಡ್ಕರ್ ಅವರು ಪರಿಹಾರದ ಬದಲು ಪರಿವರ್ತನೆಗಾಗಿ ಹೋರಾಟ ಮಾಡಿದ್ದಾರೆ. ನಾವೆಲ್ಲರೂ ಬಾಬಾಸಾಹೇಬರ ಅಭಿಮಾನಿಗಳಾಗಬಾರದು. ಅವರ ಅನುಯಾಯಿಗಳಾದರೆ ಮಾತ್ರ ಮಾನಸಿಕ ಗುಲಾಮಗಿರಿಯಿಂದ ಹೊರಗೆ ಬರಲು ಸಾಧ್ಯ.| ವಿಠಲ ವಗ್ಗನ್ಪ್ರಗತಿಪರ ಚಿಂತಕ ಕಲಬುರಗಿ
ಯಾವ ಧರ್ಮದಲ್ಲಿ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿ ಅಸಮಾನತೆ, ಸ್ವಾತಂತ್ರೃ ಅಭಾವ, ಅವಕಾಶ ಇರದಿರುವಿಕೆ ಸೇರಿ ನಾನಾ ಕೊರತೆ ಕಾಡುತ್ತವೆ. ಹೀಗಾಗಿ ಇಂಥ ಧರ್ಮಗಳನ್ನು ಧಿಕ್ಕರಿಸಿ ಸಮಾನತೆ, ಗೌರವ, ನ್ಯಾಯ ಮತ್ತು ಭ್ರಾತ್ವತ್ವ ಇರುವ ಧರ್ಮದೆಡೆ ವಾಲಬೇಕು.| ವಿಠಲದಾಸ ಪ್ಯಾಗೆ, ಪ್ರಾಚಾರ್ಯ
ಮತಗಳನ್ನು ಮಾರಾಟ ಮಾಡಿಕೊಳ್ಳುವ ಸಮಾಜ ಎಂದಿಗೂ ಆಳುವ ಸಮಾಜ ಆಗಲಾರದು. ಮತಗಳು ಮಾರಾಟಕ್ಕೆ ಇಡಬಾರದು. ಬಾಬಾಸಾಹೇಬರ ತತ್ವಾದರ್ಶ ಅಳವಡಿಸಿಕೊಂಡು ಸ್ವಾಭಿಮಾನಿ, ಸ್ವಾಲವಂಬಿಯಾಗಿ ಜೀವಿಸಬೇಕು.| ಅನೀಲಕುಮಾರ ಟೆಂಗಳಿಕಲಬುರಗಿಯ ಉಪನ್ಯಾಸಕ