ಜಿಲ್ಲೆ

ಅಂಬೇಡ್ಕರರ ತತ್ವಾದರ್ಶಗಳನ್ನು ಪಾಲಿಸೋಣ: ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಕರೆ

ಹಾಸನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯುವ ಮೂಲಕ ಅವರ ತತ್ವ ಆದರ್ಶಗಳನ್ನು ಪಾಲಿಸೋಣ ಎಂದು ಶಾಸಕ ಎಚ್.ಪಿ. ಸ್ವರೂಪ ಪ್ರಕಾಶ್ ಕರೆ ನೀಡಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 68ನೇ ಪರಿ ನಿರ್ವಾಣ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಭಾರತ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿರುವ ಅಂಬೇಡ್ಕರ್ ಅವರು ಮಹಿಳೆಯರಿಗೆ, ದೀನ ದಲಿತರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿಕೊಟ್ಟಿದ್ದಾರೆ. ಬದುಕಿನುದ್ದಕ್ಕೂ ಎಲ್ಲರಿಗೂ ಸಮಾನತೆ ಕಲ್ಪಿಸಿಕೊಡಲು ಹೋರಾಟ ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊನೆಯ ದಿನಗಳಲ್ಲಿ ಹಿಂದು ಧರ್ಮ ತ್ಯಜಿಸಿ ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಬೌದ್ಧ ಧರ್ಮ ಸ್ವೀಕಾರ ಮಾಡಿದರು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಮಾತನಾಡಿ, ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಮಹಿಳೆಯರಿಗೆ ಇಂದು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ಥಾನಮಾನ ದೊರೆತಿದೆ. ಇದರ ಪ್ರತಿ ಫಲವಾಗಿ ನಮ್ಮಂತಹ ಸಾವಿರಾರು ಮಹಿಳೆಯರು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವಂತಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರೆಯುವಂತೆ ಮಾಡುವ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಶ್ರೇಷ್ಠವಾದ ಬೃಹತ್ ಸಂವಿಧಾನದವನ್ನು ನೀಡಿದ್ದು, ಅಂಬೇಡ್ಕರ್‌ರವರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು ಹಾಗೂ ಅವರಿಗೆ ಎಂದಿಗೂ ಕೃತಜ್ಞತೆ ಹೊಂದಿರಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾತನಾಡಿ, ಯಾವುದೇ ಸಮುದಾಯದ ಹೆಣ್ಣು ಮಕ್ಕಳು ಕೂಡ ಎಂತಹ ದೊಡ್ಡ ಹುದ್ದೆಯನ್ನಾದರೂ ಅಲಂಕರಿಸಬಹುದು ಎಂಬುದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನವೇ ಮೂಲ ಕಾರಣವಾಗಿದೆ. ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿರುವ ಅವರ ತತ್ವಗಳನ್ನು ಎಲ್ಲರೂ ಅಳವಡಿಕೊಳ್ಳಬೇಕು. ಜತೆಗೆ ಅದನ್ನು ಆಚರಣೆ ಮಾಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ಆಗಬೇಕಿದೆ ಹಾಗೂ ಎಲ್ಲರೂ ಒಂದೇ ಎಂಬುದನ್ನು ಸಂವಿಧಾನದ ಮಹತ್ವ ತಿಳಿದು ಕಾನೂನು ಪಾಲಿಸಬೇಕು ಎಂಸು ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಕೆ ಟಿ ಶಾಂತಲಾ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ವ್ಯಕ್ತಿತ್ವದಿಂದ ಇಡೀ ದೇಶವನ್ನು ಬದಲಾಯಿಸಿ ಸಮಾನತೆ ಸಾರಿದ್ದಾರೆ. ಅದರ ಫಲವಾಗಿ ಇಂದು ಎಲ್ಲರೂ ಸಮನಾಗಿ ಜೀವನ ಮಾಡುತ್ತಿದ್ದೇವೆ. ಅಂಬೇಡ್ಕರ್ ಅವರು ರಚಿಸಿರುವ ಕೃತಿಗಳು ಅವರ ಮಾಡಿರುವ ಕಾರ್ಯಗಳು, ಹೆಣ್ಣು ಮಕ್ಕಳಿಗೆ ನೀಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ತಿಳಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್ ಪೀರ್ ಸೇರಿದಂತೆ ದಲಿತ ಮತ್ತು ಬೌದ್ಧ ಧರ್ಮದ ಮುಖಂಡರು ಪಾಲ್ಗೊಂಡಿದ್ದರು.