ಮೈಸೂರು: ಪೌರಾಣಿಕ ಪುರುಷ ಮಲೆ ಮಹಾದೇಶ್ವರ ಅವರು ಮೊದಲು ಉಳಿದುಕೊಂಡಿದ್ದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಅಂಬಿಗರಹಳ್ಳಿಯಲ್ಲಿ ಅಕ್ಟೋಬರ್ 14ರಿಂದ 16 ರಂದು ಮಹಾ ಕುಂಭಮೇಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಾದೇಶ್ವರ ಜಯಂತ್ಯೋತ್ಸವ ಸಮಿತಿಯ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ. ಮಾದೇಗೌಡ ತಿಳಿಸಿದರು.
ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ನದಿಗಳ ಸಂಗಮ ಕ್ಷೇತ್ರ ದಾಗಿದೆ. ಇಲ್ಲಿ ಈ ಬಾರಿ ಆಯೋಜಿಸಿರುವ ಕುಂಭಮೇಳದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಾನಾ ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಂಭಮೇಳದ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟದಿಂದ ಆಕ್ಟೋಬರ್ 6ರಂದು ಮೂರು ಜ್ಯೋತಿಗಳು ಹೊರಟು ಅ.12ರಂದು ಕೆ.ಆರ್.ಪೇಟೆ ತಲುಪಲಿವೆ. ಭವ್ಯ ಮೆರವಣಿಗೆ ಮೂಲಕ ಜ್ಯೋತಿಯನ್ನು ಸಂಗಮ ಕ್ಷೇತ್ರಕ್ಕೆ ತರಲಾಗುವುದು ಎಂದು ಹೇಳಿದರು.
ಮಹಾ ಕುಂಭಮೇಳದಲ್ಲಿ ಐದರಿಂದ ಆರು ಲಕ್ಷ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ವೇಳೆ ನೂತನ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ಮೂರೂ ದಿನ ಭಕ್ತರಿಗೆ ಉಚಿತ ದಾಸೋಹ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು.
ಸಮಿತಿಯ ಮುಖಂಡರಾದ ಪ್ರಭುಸ್ವಾಮಿ, ಸಣ್ಣಸ್ವಾಮಿಗೌಡ ಇದ್ದರು.