ಚನ್ನರಾಯಪಟ್ಟಣ: ಜಾತ್ಯತೀತ ಸಮಾಜ ನಿರ್ಮಿಸುವ ಉದ್ದೇಶದಿಂದ ಹೋರಾಡಿದ ನಿಜಶರಣ ಅಂಬಿಗರ ಚೌಡಯ್ಯ ಅವರ ವಚನಗಳು, ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಗಂಗಾಮತಸ್ಥರ ಸಂಘದ ವತಿಯಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತೋತ್ಸವ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಹನ್ನೆರಡನೇ ಶತಮಾನ ಕಂಡ ಸಾವಿರಾರು ಶಿವಶರಣರಲ್ಲಿ ಅಂಬಿಗರ ಚೌಡಯ್ಯ ಅವರೂ ಒಬ್ಬರು. ಅವರು ವಚನಗಳ ಮೂಲಕ ಶ್ರೇಷ್ಠ ವಚನಕಾರರಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಶಿವ ಶರಣರು, ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ, ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಅವರ ಆಚಾರ-ವಿಚಾರ, ತತ್ವಾದರ್ಶಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ವಚನಕಾರರು ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದಾರೆ. ಅವರ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗಬೇಕು ಎಂದರು.
ತಹಸೀಲ್ದಾರ್ ವಿ.ಎಸ್.ನವೀನ್‌ಕುಮಾರ್ ಮಾತನಾಡಿದರು. ತಾಲೂಕು ಗಂಗಾಮತಸ್ಥರ ಸಂಘದ ಅಧ್ಯಕ್ಷ ಸಿ.ಜಿ.ಕುಮಾರ್, ಉಪಾಧ್ಯಕ್ಷ ಬೋರಣ್ಣ, ಕಾರ್ಯದರ್ಶಿ ವೆಂಕಟೇಶ್ ಬಾಗೂರು, ನಿರ್ದೇಶಕರಾದ ಮಂಜುನಾಥ್, ನಿಂಗಪ್ಪ, ಸಿ.ಟಿ.ಕುಮಾರ್, ಮುಖಂಡರಾದ ಗೋವಿಂದಪ್ಪ ಬಾಗೂರು, ಲೋಕೇಶ್ ಹಿರೀಸಾವೆ ಮತ್ತಿತರರು ಭಾಗವಹಿಸಿದ್ದರು