ಜಿಲ್ಲೆ

ಅಂಬಿಗ ಸಮುದಾಯಕ್ಕೆ ಮೀಸಲಾತಿ ಒದಗಿಸಿ: ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ

ಸೊರಬ: ಆರ್ಥಿಕವಾಗಿ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಅಂಬಿಗ ಸಮುದಾಯವನ್ನು ಬೆಸ್ತ, ಕೂಲಿ ಮುಂತಾದ ಜಾತಿಗಳಿಂದ ಗುರುತಿಸಲಾಗಿದೆ. ಇಂತಹ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರಗಳು ಮೀಸಲಾತಿ ಸೌಲಭ್ಯ ನೀಡಬೇಕು ಎಂದು ನರಸೀಪುರದ ನಿಜಗುಣ ಅಂಬಿಗ ಚೌಡಯ್ಯ ಪೀಠದ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಗಂಗಾಮತ ಸಮಾಜದಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದ ಏಕತೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ನಿಮ್ಮೆಲ್ಲರ ತಾಳ್ಮೆ ಅಸಾಮಾನ್ಯ. ಬಹಳ ಹಿಂದುಳಿದ ಅಂಬಿಗ ಸಮುದಾಯವನ್ನು ಸರ್ಕಾರಗಳು ಕಡೆಗಣಿಸುತ್ತಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಚಿಕ್ಕ ಸಮಾಜಗಳು ಹಲವಾರು ಸಮಸ್ಯೆಗಳ ನಡುವೆಯೂ ಶೈಕ್ಷಣಿಕ ಪ್ರಗತಿ ಹೊಂದುತ್ತಿರುವುದು ಸಂತಸದ ಸಂಗತಿ. ಒಗ್ಗಟ್ಟಿನ ಮೂಲಕ ಸಮಾಜವನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬರ ಶ್ರಮ ಅಗತ್ಯ ಎಂದು ಹೇಳಿದರು.

ಶ್ರೀ ರಂಗನಾಥ ದೇವಾಸ್ಥನದಿಂದ ವಿವಿಧ ಕಲಾ ಮೇಳಗಳ ತಂಡದೊಂದಿಗೆ ಅಂಬಿಗರ ಚೌಡಯ್ಯ ಅವರ ಭಾವಚಿತ್ರ ಹಾಗೂ ನರಸೀಪುರದ ನಿಜಗುಣ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿಗಳ ಮೆರವಣಿಗೆ ನಡೆಯಿತು.