ವಿರಾಜಪೇಟೆ: ನಗರದ ಮಲೆತಿರಿಕೆ ಬೆಟ್ಟದ ಬಳಿ ವಸತಿ ಪ್ರದೇಶದಲ್ಲಿ ಕುಸಿತ ಭೀತಿ ಹಿನ್ನೆಲೆ ಸ್ಥಳಾಂತರಗೊಳ್ಳುವವರಿಗೆ ಪುನರ್ವಸತಿ ಕಲ್ಪಿಸಲು ಬಿಟ್ಟಂಗಾಲ ಗ್ರಾಮದ ಬಳಿ ಅಂಬಟ್ಟಿಯಲ್ಲಿ ಖರೀದಿಸಿರುವ ಸುಮಾರು 8 ಎಕರೆ ಪ್ರದೇಶಕ್ಕೆ ಸೋಮವಾರ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಪರಿಶೀಲಿಸಿದರು.
ಈ ಪ್ರದೇಶದಲ್ಲಿ ಬೃಹತ್ ಕಲ್ಲು ಬಂಡೆಗಳು, ಕಾಡುಮರಗಳು ಬೆಳೆದಿದ್ದು ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಾಗದ ನಕ್ಷೆ ವೀಕ್ಷಿಸಿದ ಶಾಸಕರು, ಮೊದಲು ಮುಂಭಾಗದಲ್ಲಿ ನಿವೇಶನದ ಕಾಮಗಾರಿ ಆರಂಭಿಸುವಂತೆ ತಹಸೀಲ್ದಾರ್ ಎಚ್.ಎನ್.ರಾಮಚಂದ್ರ ಹಾಗೂ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರಿಗೆ ತಿಳಿಸಿದರು.
ಇದೇ ಸಂದರ್ಭ ಈ ಜಾಗದ ಅಕ್ಕಪಕ್ಕದ ನಿವಾಸಿಗಳು ಕಾಮಗಾರಿ ನಡೆಸುವ ಸಂದರ್ಭ ಕಿರಿದಾದ ರಸ್ತೆ ವಿಸ್ತರಣೆ ಮಾಡುವಂತೆ ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಕಂದಾಯ ಅಧಿಕಾರಿ ಹರೀಶ್, ಪುರಸಭೆ ಸದಸ್ಯರಾದ ರಾಜೇಶ್ ಪದ್ಮನಾಭ, ಮೊಹಮ್ಮದ್ ರಫಿ, ರಜನಿಕಾಂತ್ ಇತರರಿದ್ದರು.