ಜಿಲ್ಲೆ

ಅಂಧರ ಸಂಘದ ಸದಸ್ಯರ ಪ್ರತಿಭಟನೆ

ಮೈಸೂರು: ಅಂಧ ಹಾಗೂ ಶ್ರವಣದೋಷವುಳ್ಳವರಿಗಾಗಿ ಮೀಸಲಿಟ್ಟ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಜಲ ಸಂಗ್ರಹಾಗಾರ ಕಾಮಗಾರಿ ಸ್ಥಗಿತಗೊಳಿಸಿ ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಅಂಧರ ಸಂಘದ ಸದಸ್ಯರು ತಿಲಕ್‌ನಗರದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಎದುರು ಮಂಗಳವಾರವೂ ಪ್ರತಿಭಟನೆ ನಡೆಸಿದರು.


ಅಂಧ ಹಾಗೂ ಶ್ರವಣ ಮಕ್ಕಳ ಸರ್ಕಾರಿ ವಸತಿ ಪಾಠಶಾಲೆಗೆ 1901ರಲ್ಲಿ ಅಂದಿನ ಮೈಸೂರು ಮಹಾರಾಣಿ ಅವರು 8.5 ಎಕರೆ ಜಾಗವನ್ನು ದೇಣಿಗೆಯಾಗಿ ನೀಡಿದ್ದರು. ಈ ಸ್ಥಳದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ಜಲ ಸಂಗ್ರಹಾಗಾರ ನಿರ್ಮಿಸಲು ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.


ಈ ಸ್ಥಳದಲ್ಲಿ ಅಂಗವಿಕಲರ ಶೈಕ್ಷಣಿಕ ಸಂಸ್ಥೆ ನಿರ್ಮಾಣ ಮಾಡಲು ಖಾಲಿ ಜಾಗದ ಅವಶ್ಯಕತೆ ಇದೆ. ಅಂಧರ ಮತ್ತು ಶ್ರವಣದೋಷವುಳ್ಳವರಿಗಾಗಿ ವಿಶೇಷ ಬಿ.ಇಡಿ, ಎಂ.ಎಡ್ ಕಾಲೇಜುಗಳು ಬ್ರೈಲ್ ಮತ್ತು ಮಾತನಾಡುವ ಗ್ರಂಥಾಲಯ, ಅಂಗವಿಕಲ ಸ್ನೇಹಿ ಪಾರ್ಕ್‌ಗಳು ನಿರ್ಮಿಸಬೇಕಾಗಿದೆ. ಆದ್ದರಿಂದ ಈ ಸ್ಥಳದಲ್ಲಿ ಪ್ರಗತಿಯಲ್ಲಿರುವ ಜಲ ಸಂಗ್ರಹಾಗಾರವನ್ನು ಸ್ಥಳಾಂತರಿಸಬೇಕು. ಮರಗಳನ್ನು ಹನನ ಮಾಡಿರುವ ಜಾಗದಲ್ಲಿ ಗಿಡ ಬೆಳೆಸಬೇಕು ಎಂದು ಒತ್ತಾಯಿಸಿದರು. ಶ್ರೀನಿವಾಸ್, ಸುರೇಶ್, ಸತೀಶ್, ನಾಗೇಶ್, ಮಾರುತಿ, ನಾಗರಾಜು, ಯೋಗೇಂದ್ರ ಸ್ವಾಮಿ ಇತರರಿದ್ದರು.