ರಾಮೇನಹಳ್ಳಿ ಗ್ರಾಮದ ಅಂಧರ ರೈತನಿಗೆ ತಿದ್ದುಪಡಿ ಮಾಡಿದ ಪಹಣಿಯನ್ನು ಗ್ರಾಮ ಆಡಳಿತಾಧಿಕಾರಿ ಅರ್ಪಿತಾ ವಿತರಿಸಿದರು. 
ಜಿಲ್ಲೆ

ಅಂಧ ರೈತನ ಕೈ ಸೇರಿದ ಪಹಣಿ

ಕೆ.ಆರ್.ಪೇಟೆ: ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಅವರ ಆದೇಶದ ಮೇರೆಗೆ ತಾಲೂಕಿನ ಕಿಕ್ಕೇರಿ ಹೋಬಳಿ ಚೌಡೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದ ಅಂಧ ರೈತನಿಗೆ ತಿದ್ದುಪಡಿ ಮಾಡಿದ ಪಹಣಿಯನ್ನು ಗ್ರಾಮ ಆಡಳಿತಾಧಿಕಾರಿ ಅರ್ಪಿತಾ ತಲುಪಿಸಿದರು.

ರಾಮೇನಹಳ್ಳಿ ಗ್ರಾಮದ ಅಂಧ ದೇವರಾಜು ಅವರಿಗೆ ರಾಮೇನಹಳ್ಳಿ ಗ್ರಾಮದ ಸರ್ವೇ ನಂ. 28ರಲ್ಲಿ 32 ಗುಂಟೆ ಕೃಷಿ ಭೂಮಿ ಇತ್ತು. ಕಂದಾಯ ಇಲಾಖೆಯಕೈತಪ್ಪಿನಿಂದ 1972ರಿಂದಲೂ ದೇವರಾಜು ಅವರ ಹೆಸರು ಪಹಣಿ(ಆರ್‌ಟಿಸಿ)ಯಲ್ಲಿ ಕೈಬಿಟ್ಟು ಹೋಗಿತ್ತು. ತಮ್ಮ ಹೆಸರಿನ ಆರ್‌ಟಿಸಿ ಪಡೆಯಲು ಕಣ್ಣು ಕಾಣದ ಅಂಧ ದೇವರಾಜು ತಾಲೂಕು ಕಚೇರಿಗೆ ಸುತ್ತಿ ಸುತ್ತಿ ಬೆಂಡಾಗಿ ಹೋಗಿದ್ದರು.

ಪಾಂಡವಪುರ ಉಪವಿಭಾಗಕ್ಕೆ ನೂತನ ಎಸಿ ಆಗಿ ಅಧಿಕಾರ ಸ್ವೀಕರಿಸಿರುವ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಅ.18ರಂದು ಪಟ್ಟಣದ ತಾಲೂಕು ಕಚೇರಿಯಲ್ಲಿ ಕಡತ ವಿಲೇವಾರಿ ಕಾರ್ಯ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಅಂಧ ದೇವರಾಜು ಉಪ ವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.

ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿ ಡಾ. ಶ್ರೀನಿವಾಸ್ ಸ್ಥಳದಲ್ಲಿದ್ದ ಕಿಕ್ಕೇರಿ ನಾಡಕಚೇರಿಯ ಉಪತಹಸೀಲ್ದಾರ್ ಲಕ್ಷ್ಮೀಕಾಂತ್ ಅವರಿಗೆ ಪಹಣಿ ದೋಷ ಸರಿಪಡಿಸಿ ರೈತನ ಮನೆ ಬಾಗಿಲಿಗೆ ತಲುಪಿಸುವಂತೆ ಆದೇಶಿಸಿದ್ದರು. ಕಂದಾಯ ಇಲಾಖೆಯ ಅಧಿಕಾರಿಗಳು ಪಹಣಿಯಲ್ಲಿನ ಲೋಪವನ್ನು ಸರಿಪಡಿಸಿತಿದ್ದುಪಡಿಯಾದ ಆರ್‌ಟಿಸಿಯನ್ನು ಗ್ರಾಮ ಆಡಳಿತಾಧಿಕಾರಿ ಅರ್ಪಿತಾ ಅವರು ರೈತ ದೇವರಾಜು ಅವರ ಮನೆಗೆ ತೆರಳಿ ಹಸ್ತಾಂತರಿಸಿದರು.

ಹಲವು ದಶಕಗಳ ಸಮಸ್ಯೆಯನ್ನು ಸರಿಪಡಿಸಿಕೊಟ್ಟ ಉಪವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗೆ ರೈತ ದೇವರಾಜು ಕೃತಜ್ಞತೆ ಸಲ್ಲಿಸಿದ್ದಾರೆ.