ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಸಾಮಾನ್ಯ ಕೃಷಿ ಕುಟುಂಬದಿಂದ ಬಂದಿರುವ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದು ತವರು ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಜಿಲ್ಲೆಯ ವರುಣ ಹೋಬಳಿ ಸಿದ್ದರಾಮನಹುಂಡಿ ಗ್ರಾಮದಿಂದ ಹಂತ ಹಂತವಾಗಿ ಏರಿದ ಅವರು ವಿಧಾನಸೌಧ 3ನೇ ಮಹಡಿಯ ಅಧಿಕಾರ ಗದ್ದುಗೆ ಏರಿದ್ದಾರೆ.
ನಗರದ ಕೆಲ ಕಡೆ ಎಲ್‌ಇಡಿ ಬೃಹತ್ ಪರದೆ ಮೂಲಕ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಜನರು ವೀಕ್ಷಿಸಿದರು. ಈ ಕ್ಷಣವನ್ನು ಜಿಲ್ಲೆಯ ಜನರು ಸುದ್ದಿವಾಹಿನಿಗಳ ಮೂಲಕವೂ ವೀಕ್ಷಿಸಿದರು. ಬಹಳಷ್ಟು ಕಾಂಗ್ರೆಸ್ ಕಾರ್ಯಕರ್ತರು ರಾಜಧಾನಿಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರುಣ ಕ್ಷೇತ್ರದಿಂದಲೇ ಸಿಎಂ ಆಗಿರುವುದು ವಿಶೇಷ
ಸಿದ್ದರಾಮಯ್ಯ ಅವರಿಗೆ 2ನೇ ಬಾರಿ ಸಿಎಂ ಗಾದಿ ಒಲಿಯಿತು. 2013 ಮೇ 13ರಂದು ಮುಖ್ಯಮಂತ್ರಿಯಾಗಿ ಇದೇ ಕಂಠೀರವ ಕ್ರೀಡಾಂಗಣದಲ್ಲೇ ಅಧಿಕಾರ ಸ್ವೀಕಾರ ಮಾಡಿ 5 ವರ್ಷ ಪೂರ್ಣಾವಧಿಯನ್ನು ಪೂರೈಸಿದ್ದರು. ಇದೀಗ 10 ವರ್ಷ 7 ದಿನಗಳ ಬಳಿಕ ಸಿಎಂ ಕುರ್ಚಿಯನ್ನು ಮತ್ತೊಮ್ಮೆ ಏರಿದ್ದಾರೆ. ಅಂದು, ಇಂದು ವರುಣ ಕ್ಷೇತ್ರದಿಂದಲೇ ಸಿಎಂ ಆಗಿರುವುದು ವಿಶೇಷ. ಜಿಲ್ಲೆಯ ಡಿ.ದೇವರಾಜ ಅರಸು ಬಳಿಕ 2ನೇ ಬಾರಿಗೆ ಸಿಎಂ ಆಗಿರುವ ಹಿರಿಮೆ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.
ಶಾಲೆ ಬಿಟ್ಟು ದನ ಮೇಯಿಸಿದರು:
1948ರ ಆಗಸ್ಟ್ 12ರಂದು ಜನಿಸಿರುವ ಸಿದ್ದರಾಮಯ್ಯ ಅವರದು ಸಾಮಾನ್ಯ ಕುಟುಂಬ. ಎಸ್‌ಎಸ್‌ಎಲ್‌ಸಿ ಪಾಸು ಮಾಡುವುದೇ ಕಠಿಣವಾಗಿದ್ದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ತಮ್ಮ ಕುಟುಂಬದಲ್ಲಿ ಪದವಿ ಪಡೆದ ಮೊದಲಿಗರು. ಅವರು ಬಾಲ್ಯದ ದಿನಗಳನ್ನು ಕಳೆದದ್ದು ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲೇ. ಆರಂಭದ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಶಾಲೆ ಬಿಟ್ಟು ದನ ಮೇಯಿಸುವ ಕಾಯಕ ಮಾಡಿದ್ದರು. ಆದರೆ, ಅವರಲ್ಲಿನ ಪ್ರತಿಭೆಯನ್ನು ಗಮನಿಸಿದ ಶಿಕ್ಷಕರು ಶಾಲೆಗೆ ಕರೆತಂದು ನೇರವಾಗಿ 4ನೇ ತರಗತಿಗೆ ಪ್ರವೇಶ ನೀಡಿದರು.
ಕಾನೂನು ವ್ಯಾಸಂಗ:
ಪ್ರಾಥಮಿಕ ಶಿಕ್ಷಣದ ಬಳಿಕ ಅವರು ಬಂದಿದ್ದು ಮೈಸೂರು ಕಡೆಗೆ. ಯುವರಾಜ ಕಾಲೇಜಿಗೆ ಪ್ರವೇಶ ಪಡೆದ ಅವರು ಬಿ.ಎಸ್ಸಿ ಪದವಿ ಪಡೆದರು. ಅಪ್ಪನ ಡಾಕ್ಟರ್ ಬಯಕೆಯ ಹೊರತಾಗಿಯೂ ಸಿದ್ದರಾಮಯ್ಯ ಕಾನೂನು ವ್ಯಾಸಂಗಕ್ಕೆ ಮುಂದಾದರು. ಕಾನೂನು ಪದವಿಗಾಗಿ ಶಾರದಾ ವಿಲಾಸ ಕಾಲೇಜಿಗೆ ಸೇರ್ಪಡೆಯಾದರು. ಪದವಿ ನಂತರ ಕೆಲಕಾಲ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು. ಇದಾದ ನಂತರ ವಕೀಲ ವೃತ್ತಿ ಆರಂಭಿಸಿದರು.
ರಾಜಕೀಯಕ್ಕೆ ಪ್ರವೇಶ:
ಸಿದ್ದರಾಮಯ್ಯನವರಲ್ಲಿ ಸಾಮಾಜಿಕ ನ್ಯಾಯದ ಆಶಯ ಸೈದ್ಧಾಂತಿಕವಾಗಿ ಸ್ಪಷ್ಟಗೊಳ್ಳಲು ಕಾರಣವಾದುದು ಡಾ.ರಾಮಮನೋಹರ ಲೋಹಿಯಾ ಚಿಂತನೆ. ಇದಕ್ಕಾಗಿ ಅವರು ವಕೀಲ ವೃತ್ತಿಯನ್ನು ಬಿಟ್ಟು ರಾಜಕಾರಣಕ್ಕೆ ಪ್ರವೇಶಿಸಿದರು. ರಾಜಕೀಯದಲ್ಲಿ ಒಂದೊಂದೇ ಹೆಜ್ಜೆ ಇಡುತ್ತ ಮುಂದೆ ಸಾಗಿದರು. 1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು. ಪ್ರೊ.ಎಂ.ಡಿ ನಂಜುಂಡಸ್ವಾಮಿ ಸಂಪರ್ಕಕ್ಕೆ ಬಂದರು.
1980ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತರು. 1983ರ ವಿಧಾನಸಭೆ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜಯಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷಗಿರಿ ದೊರೆಯಿತು. ನಂತರ ರೇಷ್ಮೆ ಸಚಿವರಾದರು.
1985ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದಾಗ ಸಿದ್ದರಾಮಯ್ಯ ಜನತಾಪಕ್ಷದಿಂದ ಸ್ಪರ್ಧಿಸಿ 2ನೇ ಬಾರಿ ಚುನಾಯಿತರಾದರು. ಬಳಿಕ ಪಶು ಸಂಗೋಪನೆ, ರೇಷ್ಮೆ ಮಂತ್ರಿಯಾದರು. ಎಸ್.ಆರ್.ಬೊಮ್ಮಾಯಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. 1989ರಲ್ಲಿ ಜನತಾಪಕ್ಷ ಇಬ್ಭಾಗವಾಗಿ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷ ಅಸ್ತಿತ್ವಕ್ಕೆ ಬಂತು. ಸಿದ್ದರಾಮಯ್ಯ ಆಗ ಜನತಾದಳದೊಂದಿಗೆ ಗುರುತಿಸಿಕೊಂಡರು. ಆದರೆ, ಆ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸೋತರು. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು.
ಜೆಡಿಎಸ್‌ನಿಂದ ಕಾಂಗ್ರೆಸ್ ಕಡೆಗೆ:
ಜೆಡಿಎಸ್‌ನಿಂದ ಹೊರಬಂದ ಸಿದ್ದರಾಮಯ್ಯ 2006ರ ಜುಲೈ 22ರಂದು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಇದು ಅವರ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವು ನೀಡಿತು. ಬಳಿಕ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರೋಚಕ ಗೆಲುವು ಸಾಧಿಸಿದರು. ಇದುವೇ ಅವರಿಗೆ ರಾಜಕೀಯ ಮರುಜನ್ಮ. 2008ರಲ್ಲಿ ರಚನೆಯಾದ ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ವಿಧಾನಸಭೆ ಪ್ರವೇಶಿಸಿದರು. ಬಳಿಕ ಅವರು ವಿಧಾನಸಭೆ ಪ್ರತಿಪಕ್ಷ ನಾಯಕರಾದರು. 2013ರ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದರು. 2018ರಲ್ಲಿ ಬಾದಾಮಿ ಕ್ಷೇತ್ರದಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದರು. ಇದೀಗ ಸಿಎಂ ಆಗಿ ಮತ್ತೊಮ್ಮೆ ಬಡ್ತಿ ಪಡೆದುಕೊಂಡಿದ್ದಾರೆ.
ಮಾತಿನಲ್ಲಿ ಗ್ರಾಮ ಭಾಷೆ ಸೊಗಡು:
ಸಿದ್ದರಾಮಯ್ಯ ಮಾತಿಗೆ ನಿಂತರೆ ಅಪ್ಪಟ ಮೈಸೂರು ಸೀಮೆಯ ಗ್ರಾಮ ಭಾಷೆ ಸೊಗಡು ಹೊರಹೊಮ್ಮುತ್ತದೆ. ಆ ಶೈಲಿಯಲ್ಲೇ ಭಾಷಣ ಮಾಡಿ ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಾರೆ.
ಸಿದ್ದರಾಮಯ್ಯ ರಾಜಕೀಯವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವರೊಳಗಿನ ಸಿದ್ರಾಮನಹುಂಡಿ ಸಿದ್ರಾಮಣ್ಣ ಮಾತ್ರ ಪರಿವರ್ತನೆ ಆಗಲಿಲ್ಲ. ಜಾನಪದ ಕಲೆಯಾದ ವೀರಗಾಸೆ ಕುಣಿತ ಅವರಿಗೆ ಇಷ್ಟ. ಪ್ರತಿ ಬಾರಿ ಹಳ್ಳಿಯಲ್ಲಿ ಏರ್ಪಡಿಸುವ ಹಬ್ಬಕ್ಕೆ ತಪ್ಪದೆ ಭಾಗವಹಿಸುವ ಜತೆಗೆ ಹಳ್ಳಿಯವರೊಂದಿಗೆ ನೃತ್ಯದಲ್ಲಿ ಹೆಜ್ಜೆ ಹಾಕುತ್ತಾರೆ. ಬೋಂಡಾ ಸಾಂಬಾರು, ನಾಟಿ ಕೋಳಿ ಸಾರು ಮತ್ತು ರಾಗಿಮುದ್ದೆ ಅವರ ನೆಚ್ಚಿನ ಖಾದ್ಯಗಳು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಗೃಹಿಣಿ. ಹಿರಿಯ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಹಠಾತ್ ಅನಾರೋಗ್ಯದಿಂದ ಅವರು ನಿಧನ ಹೊಂದಿದ ಮೇಲೆ ವೃತ್ತಿಯಿಂದ ವೈದ್ಯರಾದ ಕಿರಿಯ ಪುತ್ರ ಡಾ.ಎಸ್.ಯತೀಂದ್ರ ರಾಜಕೀಯರಂಗ ಪ್ರವೇಶಿಸಿದರು.