ಗಜೇಂದ್ರಗಡ: ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಉದ್ಯಾನಕ್ಕೆ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಸೂಕ್ತ ನಿರ್ವಹಣೆ ಇಲ್ಲದೆ ಉದ್ಯಾನ ಅವ್ಯವಸ್ಥೆಯ ಆಗರವಾಗಿದ್ದು, ವಾಯುವಿಹಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಈ ಕುರಿತು ‘ಅಂದಗೆಡುತ್ತಿದೆ ಕಿತ್ತೂರ ಚನ್ನಮ್ಮ ಉದ್ಯಾನ’ ಶೀರ್ಷಿಕೆಯಡಿ ಜುಲೈ 19ರಂದು ವಿಜಯವಾಣಿ ವಿಸõತ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿರುವ ಅವರು ‘ಉದ್ಯಾನದ ಅಂದಕ್ಕಾಗಿ ಇನ್ನೂ ಹಲವು ಗಿಡಗಳನ್ನು ನೆಡಲಾಗುವುದು. ಉದ್ಯಾನ ಮತ್ತು ಶೌಚಗೃಹಗಳನ್ನು ಸ್ವಚ್ಛಗೊಳಿಸಲಾಗುವುದು. ಮಕ್ಕಳ ಆಟಿಕೆ ಸಾಮಾನು ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು. ನೀರಿನ ಸಮಸ್ಯೆ ನೀಗಲು ಹೊಸ ಬೋರ್ವೆಲ್ ಕೊರೆಯಿಸಲಾಗುವುದು. ಕಾವಲುಗಾರರ ನೇಮಕ ಮಾಡುವುದು. ಉದ್ಯಾನದಲ್ಲಿ ಕಿಡಗೇಡಿಗಳು ಎಸೆದಿರುವ ಸಿಗರೇಟ್, ಮದ್ಯದ ಬಾಟಲಿ ತೆರವುಗೊಳಿಸಿ, ಮುಂದೆ ಹಾಗಾಗದಂತೆ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.