ಗುತ್ತಲ: ಮೃತನ ಅಂತ್ಯಸಂಸ್ಕಾರದ ಬಳಿಕ ಕರೊನಾ ಸೋಂಕು ಇರುವುದು ಮಂಗಳವಾರದ ವರದಿಯಲ್ಲಿ ದೃಢಪಟ್ಟಿದೆ. ಇದರಿಂದಾಗಿ ಸೋಮವಾರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡವರೂ ಸೇರಿ ಪಟ್ಟಣದ ಹಲವರಲ್ಲಿ ಆತಂಕ ಮನೆ ಮಾಡಿದೆ.
ಹೃದಯ, ಅಸ್ತಮಾ, ನ್ಯುಮೋನಿಯಾ ಹಾಗೂ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಟ್ಟಣದ 4ನೇ ವಾರ್ಡ್ನ 72 ವರ್ಷದ ವೃದ್ಧನನ್ನು ಶುಕ್ರವಾರ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿಯ ಕಿಮ್ಸ್ಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ವೃದ್ಧ ಮೃತಪಟ್ಟಿದ್ದಾರೆ. ಕಿಮ್್ಸ ವೈದ್ಯರ ಸೂಚನೆ ಮೇರೆಗೆ ಕುಟುಂಬಸ್ಥರು ಸೋಮವಾರ ಬೆಳಗ್ಗೆ ಶವ ತಂದು ಪಟ್ಟಣದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವೇಳೆ ವೃದ್ಧನ ಗಂಟಲ ದ್ರವ ಮಾದರಿ ತೆಗೆದುಕೊಳ್ಳಲಾಗಿತ್ತು. ಬುಧವಾರ ವರದಿ ಬಂದಿದ್ದು, ಪಾಸಿಟಿವ್ ಇರುವುದು ಗೊತ್ತಾಗಿದೆ. ಹೀಗಾಗಿ, ಮೃತ ವೃದ್ಧನ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಅನೇಕರಲ್ಲಿ ಭೀತಿ ಆವರಿಸಿದೆ. ಈಗ ಇವರೆಲ್ಲರ ಮಾಹಿತಿ ಸಂಗ್ರಹಿಸುವುದು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿದೆ.
ಮಂಗಳವಾರ ಮಧ್ಯಾಹ್ನ ಮೃತ ವ್ಯಕ್ತಿಯ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದ್ದು, ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ತಂದೆಯ ಸಾವು ಕರೊನಾ ಸೋಂಕಿನಿಂದ ಆಗಿದೆಯೇ ಎಂಬುದುನ್ನು ಖಚಿತಪಡಿಸಿ ಶವ ನೀಡುವಂತೆ ಕಿಮ್್ಸ ವೈದ್ಯರಿಗೆ ಕೋರಿದ್ದೇವು. ಕರೊನಾ ಸೋಂಕಿನಿಂದ ಸಾವು ಸಂಭವಿಸಿಲ್ಲ ಎಂದು ಹೇಳಿ ವೈದ್ಯರು ನಮಗೆ ಶವ ಹಸ್ತಾಂತರಿಸಿದ್ದಾರೆ. ಈಗ ಕರೊನಾ ಸೋಂಕು ತಗುಲಿದೆ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ನಮ್ಮ ಕುಟುಂಬ ಹಾಗೂ ಬಂಧುಗಳಿಗೆ ಬಹಳ ನೋವಾಗಿದೆ. | ಮೃತ ವ್ಯಕ್ತಿಯ ಹಿರಿಯ ಮಗ