ಜಿಲ್ಲೆ

ಅಂತ್ಯಸಂಸ್ಕಾರ ಮರೆತ ಆರೋಗ್ಯ ಇಲಾಖೆ

ಅಕ್ಕಿಆಲೂರ: ಮಲಗುಂದ ಗ್ರಾಮದ ವೃದ್ಧೆಯೊಬ್ಬರು ಕರೊನಾದಿಂದ ಮೃತಪಟ್ಟರೂ ಅವರ ಅಂತ್ಯಸಂಸ್ಕಾರವನ್ನು ಆರೋಗ್ಯ ಇಲಾಖೆ ಕೋವಿಡ್ ನಿಯಮದಂತೆ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಲಗುಂದದ 63 ವರ್ಷದ ವೃದ್ಧೆಯೊಬ್ಬರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಕಳೆದ ಭಾನುವಾರ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಗೊಳಪಡಿಸಿದಾಗ ಕರೊನಾ ಪಾಸಿಟಿವ್ ದೃಢಪಟ್ಟಿತ್ತು. ಅಲ್ಲದೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದರು. ಬಳಿಕ ಕರೊನಾ ನಿಯಮದಂತೆ ಅಂತ್ಯಸಂಸ್ಕಾರ ಮಾಡಬೇಕಾದ ಆರೋಗ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿ ಪ್ರದರ್ಶಿಸಿದೆ. ಆಂಬುಲೆನ್ಸ್​ನಲ್ಲಿ ಶವವಿಟ್ಟು ಚಾಲಕನನ್ನು ಮಾತ್ರ ಕಳುಹಿಸಿ ಕೈತೊಳೆದುಕೊಂಡಿದೆ. ಸುಮಾರು ಐದು ತಾಸು ಕಾದು ಕುಳಿತರೂ ಯಾವೊಬ್ಬ ಅಧಿಕಾರಿಗಳೂ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ. ಇದರಿಂದ ಮೃತಳ ಕುಟುಂಬದವರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಸ್ಥಳೀಯ ಇಬ್ಬರು ಆರೋಗ್ಯ ಸಿಬ್ಬಂದಿಯ ಸಹಾಯದಿಂದ ಮೃತ ಮಹಿಳೆಯ ಪುತ್ರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಪಿಪಿಇ ಕಿಟ್ ಇಲ್ಲದೆ ಅಂತ್ಯ ಸಂಸ್ಕಾರ: ಜಿಲ್ಲಾಸ್ಪತ್ರೆಯಿಂದ ಬರುವಾಗ ಆಂಬುಲೆನ್ಸ್ ಚಾಲಕ ಎರಡು ಪಿಪಿಇ ಕಿಟ್ ಮಾತ್ರ ತಂದಿದ್ದರು. ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿ ಅದನ್ನು ಧರಿಸಿ ಅಂತ್ಯ ಸಂಸ್ಕಾರಕ್ಕೆ ನೆರವಾದರು. ಆದರೆ, ಅಗ್ನಿ ಸ್ಪರ್ಶ ಮಾಡಬೇಕಿದ್ದ ಮೃತ ವೃದ್ಧೆಯ ಮಗನಿಗೆ ಪಿಪಿಇ ಕಿಟ್ ಇರಲಿಲ್ಲ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಸಂಸದರ ಸೂಚನೆ: ಕರೊನಾದಿಂದ ಮೃತಪಟ್ಟ ಮಲಗುಂದ ಗ್ರಾಮದ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಹಾನಗಲ್ಲ ತಾಲೂಕು ಆಡಳಿತ ಮೀನಮೇಷ ಮಾಡಿದ್ದರಿಂದ ಬುಧವಾರ ಅಧಿಕಾರಗಳ ಸಭೆ ಕರೆದ ಸಂಸದ ಶಿವಕುಮಾರ ಉದಾಸಿ, ‘ಇಂತಹ ಪ್ರಕರಣ ಮರುಕಳಿಸಬಾರದು. ಹೀಗಾಗಿ ಕರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ 10 ಜನರನ್ನು ನಿಯೋಜಿಸಿ’ ಎಂದು ಸೂಚಿಸಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ ಕೆ.ಜಿ. ತಿಳಿಸಿದ್ದಾರೆ.

ಕರೊನಾದಿಂದ ಮಲಗುಂದ ಗ್ರಾಮದ ಮಹಿಳೆ ಮೃತಪಟ್ಟಿದ್ದು ಅಗತ್ಯ ಕ್ರಮಕೈಗೊಳ್ಳಿ ಎಂದು ತಾಲೂಕು ಆಡಳಿತಕ್ಕೆ ತಿಳಿಸಿದ್ದೆ. ಆದರೆ, ಅಲ್ಲಿಯ ಅಧಿಕಾರಿಗಳು ಮತ್ತು ಮಲಗುಂದ ಗ್ರಾಪಂ ಏನು ಕ್ರಮ ಕೈಗೊಂಡಿದೆ ಎಂದು ನನಗೆ ಗೊತ್ತಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಂಡಿದ್ದೇನೆ. | ಡಾ. ರಾಘವೇಂದ್ರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಅಧಿಕಾರಿ
ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದು ಸರಿಯಲ್ಲ. ಕರೊನಾದಿಂದ ಮೃತಪಟ್ಟವರ ವಿಷಯದಲ್ಲಿ ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತ ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಕೈಬಿಡಬೇಕು. | ಕೃಷ್ಣ ಹುಲ್ಲಾಳ ಮೃತರ ಸಂಬಂಧಿ