ಹಾವೇರಿ: ಕರೊನಾ ಮಹಾಮಾರಿ ಬಂದ ನಂತರ ಮಾನವೀಯ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸಾರ್ವಜನಿಕರಲ್ಲಿ ಅಷ್ಟೊಂದು ಭೀತಿಯನ್ನು ಕರೊನಾ ವೈರಸ್ ಮೂಡಿಸಿದೆ.
ಸೋಂಕು ತಗುಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು, ಹತ್ತಿರದ ಸಂಬಂಧಿಕರೂ ಹೋಗದಂತಾಗಿದೆ. ಆದರೆ, ಸೋಂಕಿನಿಂದ ಮೃತರಾದವರ ಅಂತ್ಯಸಂಸ್ಕಾರಕ್ಕಾಗಿ ನೇಮಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಹಾಗೂ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಕೆಲಸ ನಿರ್ವಹಿಸುವವರ ಕಾರ್ಯವನ್ನು ಮೆಚ್ಚಲೇಬೇಕಿದೆ.
ಇವರಿಗೆ ಮೃತಪಟ್ಟ ವ್ಯಕ್ತಿ ಯಾರೆಬಂದೇ ಗೊತ್ತಿರುವುದಿಲ್ಲ. ಮೃತರ ಮನೆಯವರು ಬರದೇ ಇದ್ದರೂ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಮೃತ ವ್ಯಕ್ತಿಗೆ ಸೋಂಕಿರುವುದು ಗೊತ್ತಿದ್ದರೂ ಭಯಪಡದೇ ಗೌರವಯುತವಾಗಿ ಅಂತ ಸಂಸ್ಕಾರ ನಡೆಸುತ್ತಿದ್ದಾರೆ. 2 ತಿಂಗಳಿನಿಂದ ಮನೆಗೂ ಹೋಗದೆ ಆಸ್ಪತ್ರೆಯಲ್ಲಿನ ರೂಂನಲ್ಲಿಯೇ ಜೀವನ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಕರೊನಾ ಮಹಾಮಾರಿ ವ್ಯಾಪಕವಾಗಿದ್ದು, ಈವರೆಗೆ 24 ಜನರು ಮೃತಪಟ್ಟಿದ್ದಾರೆ. ಇವರೆಲ್ಲರ ಅಂತ್ಯಕ್ರಿಯೆಯನ್ನು ಇದಕ್ಕಾಗಿ ನೇಮಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿ ಕೈಗೊಂಡಿದ್ದಾರೆ.
ಸಂಬಂಧಿಕರೇ ಬಂದಿಲ್ಲ: ಮೃತಪಟ್ಟವರಿಂದಲೂ ಕರೊನಾ ಹರಡುತ್ತದೆ ಎಂಬ ತಪ್ಪು ತಿಳಿವಳಿಕೆಯಿಂದ ಜಿಲ್ಲೆಯಲ್ಲಿ 24 ಪ್ರಕರಣಗಳ ಪೈಕಿ 18ರಲ್ಲಿ ಅಂತ್ಯಕ್ರಿಯೆಗೆ ಸಂಬಂಧಿಕರೇ ಬಂದಿಲ್ಲ. ಕರೊನಾ ಸೇನಾನಿಗಳೇ ಮುಂದೆ ನಿಂತು ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಮೃತರ ಸಂಬಂಧಿಕರು ಕ್ವಾರಂಟೈನ್ ಇರುವುದರಿಂದ ಅಥವಾ ಕರೊನಾ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅಂತ್ಯಕ್ರಿಯೆಗೆ ಬಂದಿಲ್ಲ.
ಸ್ಮಶಾನದಲ್ಲಿ ಹೂಳಲು ವಿರೋಧ: ಸರ್ಕಾರದ ಮಾರ್ಗಸೂಚಿಯ ಪ್ರಕಾರವೇ ಆಡಳಿತ ವರ್ಗ ಸಿದ್ಧತೆ ಮಾಡಿಕೊಂಡರೂ ಅಂತ್ಯಸಂಸ್ಕಾರಕ್ಕೆ ಸ್ಮಶಾನದಲ್ಲಿ ಜಾಗ ನೀಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ಕರೊನಾ ಸೇನಾನಿಗಳು ಹಿಂಜರಿಯದೇ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಿ ಮಾನವೀಯತೆ ಮರೆಯುತ್ತಿದ್ದಾರೆ.
ರಾಣೆಬೆನ್ನೂರ ನಗರದಲ್ಲಿನ ಸ್ಮಶಾನದಲ್ಲಿ ಇಬ್ಬರ ಅಂತ್ಯಕ್ರಿಯೆಗೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ಮೂರ್ನಾಲ್ಕು ತಾಸು ನಿಲ್ಲುವ ಪ್ರಮೇಯ ಎದುರಾಗಿತ್ತು. ಬಹುಕಾಲ ಕಿಟ್ ಧರಿಸುವುದರಿಂದ ಆಗುವ ಹಿಂಸೆಯನ್ನು ಈ ಸೇನಾನಿಗಳು ಅನುಭವಿಸಿದ್ದಾರೆ.
ಇನ್ನು ಹಾನಗಲ್ಲ ತಾಲೂಕಿನಲ್ಲಿಯೂ ಮೃತರೊಬ್ಬರ ಅಂತ್ಯ ಸಂಸ್ಕಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಸರ್ಕಾರದಿಂದ ಪ್ರತ್ಯೇಕ ಜಾಗ ಗುರುತಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಮಯದಲ್ಲಿ ಮೃತ ವ್ಯಕ್ತಿಯ ತಂದೆ, ತಾಯಿ ಕ್ವಾರಂಟೈನ್ನಲ್ಲಿದ್ದರು. ಕೊನೆಯ ಬಾರಿಗೆ ಮಗನ ಮುಖ ನೋಡಲು ಅವರು ಅವಲತ್ತುಕೊಂಡರು. ಆಗ ಈ ಸಿಬ್ಬಂದಿಯೇ ಪಿಪಿಇ ಕಿಟ್ ಕೊಟ್ಟು ಮಗನ ಅಂತಿಮ ದರ್ಶನ ಮಾಡಿಸಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಸ್ಪತ್ರೆಯ ಇಬ್ಬರು ಅಧಿಕಾರಿಗಳು, ನಾಲ್ವರು ಸಿಬ್ಬಂದಿ ಈ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಜಿಲ್ಲಾಧಿಕಾರಿಯವರು ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಶ್ರೀಧರ ಬೆಂಗೇರಿ, ಪ್ರವೀಣ ಕೆಳಗಿನಮನಿ ಎಂಬುವವರನ್ನು ಮೇಲ್ವಿಚಾರಕರನ್ನಾಗಿ ನೇಮಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಪ್ರಕಾಶ ಕವದಿ, ರವಿ ಕೊಂಡಿ, ಹನುಮಂತಪ್ಪ ನೆಗಳೂರ, ಯಲ್ಲಪ್ಪ ಭಜಂತ್ರಿ, ಕುಮಾರ ತಿರುಪತಿ, ಅರುಣ ಶಿರಟ್ಟಿ, ರಾಘು ಭಜಂತ್ರಿ ಅವರು ಅಂತ್ಯಕ್ರಿಯೆಯ ಈ ಕಾರ್ಯದಲ್ಲಿ ತೊಡಗಿದ್ದಾರೆ. ಇದರಲ್ಲಿ ಮೇಲ್ವಿಚಾರಕರನ್ನು ಹೊರತುಪಡಿಸಿ ಉಳಿದವರು ನಾನ್ ಕ್ಲಿನಿಕಲ್ ಸಿಬ್ಬಂದಿಯಾಗಿದ್ದಾರೆ.
ರಾಣೆಬೆನ್ನೂರಿನಲ್ಲಿ ಐದು ಜನ ಮುಸ್ಲಿಂ ಯುವಕರ ತಂಡ ಕರೊನಾ ವೈರಸ್ನಿಂದ ಮೃತಪಟ್ಟವರನ್ನು ಗೌರವಯುತ ಶವಸಂಸ್ಕಾರ ನಡೆಸಲು ಮುಂದಾಗಿರುವುದು ಮಾದರಿಯಾಗಿದೆ. ನಗರದಲ್ಲಿ ಈಗಾಗಲೇ ಮೃತಪಟ್ಟಿರುವ ನಾಲ್ವರ ಶವ ಸಂಸ್ಕಾರವನ್ನು ಈ ಯುವಕರು ತಾಲೂಕು ಆಡಳಿತದ ಮಾರ್ಗದರ್ಶನದಲ್ಲಿ ಮಾಡಿದ್ದಾರೆ. ‘ತಾಲೂಕು ಆಡಳಿತಕ್ಕೆ ನಾವು ಸ್ವಯಂ ಪ್ರೇರಣೆಯಿಂದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದೆವೆ. ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸುವ ಉದ್ದೇಶದಿಂದ ನಮ್ಮ ಸಂಘಟನೆಯ ಸದಸ್ಯರು ಈ ಪುಣ್ಯದ ಕಾರ್ಯ ಮಾಡುತ್ತಿದ್ದೇವೆ’ ಎಂದು ತಂಡದ ಮುಖ್ಯಸ್ಥ ಶೋಹಿಬ್ ವಿಜಯವಾಣಿಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ಕರೊನಾದಿಂದ ಮೃತಪಟ್ಟವರ ಶರೀರದಿಂದ ಯಾವುದೇ ವೈರಾಣು ಹರಡದಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಂಡಿರುತ್ತೇವೆ. ಆದರೂ ಕೆಲವರಲ್ಲಿ ಭೀತಿ ಹೋಗುತ್ತಿಲ್ಲ. ಸತ್ತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲು ಹಿಂದೇಟು ಹಾಕುವ ಘಟನೆಗಳು ನಿಜಕ್ಕೂ ನೋವು ತಂದಿವೆ. ಮೃತರಿಂದ ಯಾವುದೇ ಸೋಂಕು ಹರಡುವುದಿಲ್ಲ. ಎಲ್ಲರೂ ಇದನ್ನು ತಿಳಿದು ಅಂತ್ಯಕ್ರಿಯೆಗೆ ಸಹಕಾರ ನೀಡಬೇಕು. | ಶ್ರೀಧರ ಬೆಂಗೇರಿ, ಅಂತ್ಯಸಂಸ್ಕಾರಕ್ಕೆ ನಿಯೋಜನೆಗೊಂಡ ಆರೋಗ್ಯ ಇಲಾಖೆ ಅಧಿಕಾರಿ ಪಿಪಿಇ ಕಿಟ್ ಧರಿಸಿ ಮೃತಪಟ್ಟವರ ಅಂತ್ಯಕ್ರಿಯೆಗೆ ಹೋದಾಗ ವಿರೋಧ ಮಾಡಿದ್ದರಿಂದ ನಾಲ್ಕಾರು ತಾಸು ಕಿಟ್ ಧರಿಸಿಕೊಂಡೇ ಇರಬೇಕಾಗಿ ಬಂದು ಸಾಕಷ್ಟು ಕಿರಿಕಿರಿ ಅನುಭವಿಸಿದ್ದೇವೆ. ಶವದಿಂದ ಯಾವುದೇ ವೈರಸ್ ಹರಡುವುದಿಲ್ಲ. ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ನಾವು ಸ್ಮಶಾನಕ್ಕೆ ತರುತ್ತೇವೆ. ಈ ಕಾರ್ಯ ಮಾಡುತ್ತಿರುವುದರಿಂದ ತಿಂಗಳುಗಟ್ಟಲೇ ನಾವು ಮನೆಗೆ ಹೋಗದೇ ಕ್ವಾರಂಟೈನ್ ಆಗಿದ್ದೇವೆ. | ರವಿ ಕೊಂಡಿ, ಜಿಲ್ಲಾಸ್ಪತ್ರೆಯ ನಾನ್ ಕ್ಲಿನಿಕಲ್ ಸಿಬ್ಬಂದಿ