ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಜಿಲ್ಲಾ ಕೌಶಲ ಮಿಷನ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹೀರೆಮಠ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ ಚವ್ಹಾಣ ಮತ್ತಿತರರಿದ್ದರು. 
ಜಿಲ್ಲೆ

ಅಂತಾರಾಷ್ಟ್ರೀಯ ವಲಸೆ ಕೇಂದ್ರ ತೆರೆಯಲು ಯೋಜನೆ ಸಿದ್ಧ

ವಿಜಯಪುರ : ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ(ಕೆಎಸ್‌ಡಿಸಿ), ಸಾರ್ವಜನಿಕ ವ್ಯವಹಾರಿಕ ಕೇಂದ್ರ (ಪಿಎಸಿ) ಸಹಯೋಗದೊಂದಿಗೆ ಪ್ರತಿ ಜಿಲ್ಲೆಯಲ್ಲೂ ಅಂತಾರಾಷ್ಟ್ರೀಯ ವಲಸೆ ಕೇಂದ್ರಗಳನ್ನು (ಐಎಮ್‌ಸಿ-ಕೆ) ತೆರೆಯಲು ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಜಿಲ್ಲಾ ಕೌಶಲ ಮಿಷನ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಿಂದ ಕರೊನಾ ವೈರಸ್‌ನಿಂದ ವಿಶ್ವದಾದ್ಯಂತ ಆರ್ಥಿಕ ಪ್ರಗತಿ ಕುಂಠಿತವಾಗಿದೆ. ವಿದೇಶಗಳ ಆರ್ಥಿಕ ಸ್ಥಿತಿಯಲ್ಲಿ ಭಾರಿ ಬದಲಾವಣೆ ಆಗಿದ್ದು, ಶೋಚನೀಯ ಸ್ಥಿತಿಯಲ್ಲಿದೆ. ಅದರ ಪರಿಣಾಮವಾಗಿ ಲಕ್ಷಾಂತರ ಜನರು ಕೆಲಸಗಳನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದು ಮತ್ತು ಉದ್ಯಮಗಳು ಕೂಡ ಭಾರಿ ಪ್ರಮಾಣದ ನಷ್ಟ ಅನುಭವಿಸಿವೆ ಎಂದರು.

ಪ್ರಸ್ತುತ ವರ್ಷದಲ್ಲಿ ಚೇತರಿಕೆಯನ್ನು ಕಂಡುಕೊಳ್ಳಲು ಉದ್ಯಮಿಗಳಿಗೆ ವಿವಿಧ ವಿಭಾಗಗಳಲ್ಲಿ ಪರಿಣಿತ ಮತ್ತು ಕೌಶಲ ಹೊಂದಿದ ತಾಂತ್ರಿಕ ಕೆಲಸಗಾರರು ಅತಿ ಅವಶ್ಯವಿದ್ದು, ಈ ನಿಟ್ಟಿನಲ್ಲಿ ಭಾರತದಿಂದ ಅದರಲ್ಲೂ ಕರ್ನಾಟಕದಿಂದ ಬೇರೆ ಬೇರೆ ದೇಶಗಳಿಗೆ ಕೆಲಸವನ್ನು ದೊರಕಿಸಿ ಕೊಡಲು ಮತ್ತು ನಿರುದ್ಯೋಗಿ ಯುವಕ-ಯುವತಿಯರಿಗಾಗಿ ವಿದೇಶಗಳಲ್ಲಿ ಕೆಲಸವನ್ನು ದೊರಕಿಸಿ ಕೊಡಲು ಸರ್ಕಾರವು ಅವಕಾಶವನ್ನು ಕಲ್ಪಿಸಿದೆ ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲೂ ಅಂತಾಷ್ಟ್ರೀಯ ವಲಸೆ ಕೇಂದ್ರಗಳನ್ನು (ಐಎಮ್‌ಸಿ-ಕೆ) ತೆರೆಯಲು ಯೋಜನೆಯನ್ನು ಸಿದ್ಧಪಡಿಸಿದ್ದು, ಈ ಯೋಜನೆಯಿಂದ ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪರಿಣಿತ ತಂತ್ರಜ್ಞಾನ, ಕೌಶಲ ತರಬೇತಿ ಹೊಂದಿದ ನಿರುದ್ಯೋಗಿ ಯುವಕ-ಯುವತಿಯರಿಗೆ ವಿದೇಶಗಳಲ್ಲಿ ಕೆಲಸವನ್ನು ಮಾಡಲು ಆಸಕ್ತಿ ಇರುವ ಹಾಗೂ ಇತರ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಅವಕಾಶಗಳನ್ನು ಕಲ್ಪಿಸಿ ಕೊಡಲಾಗುವುದು ಎಂದರು.

ಸಿಎಂಕೆವೈ ಯೋಜನೆಯಡಿ 2021-22 ನೇ ಸಾಲಿಗೆ ಜಿಲ್ಲೆಗೆ ಒಟ್ಟು 1680 ಗುರಿ ನಿಗದಿಪಡಿಸಿದ್ದು, ಅದರಲ್ಲಿ 1140 ಅಭ್ಯರ್ಥಿಗಳಿಗೆ ತರಬೇತಿ ಪೂರ್ಣಗೊಂಡಿದ್ದು, ಅಭ್ಯರ್ಥಿಗಳಿಗೆ ತರಬೇತಿ ಪ್ರಗತಿಯಲ್ಲಿರುತ್ತದೆ. ಶೇ.96ರಷ್ಟು ಗುರಿ ಸಾಧಿಸಿದೆ. ಹೊಸ ತರಬೇತಿ ಕೇಂದ್ರ ಪ್ರಾರಂಭಿಸಲು ಮತ್ತು ಈಗಾಗಲೇ ಮಾನ್ಯತೆ ಹೊಂದಿದ ಹಳೇ ತರಬೇತಿ ಕೇಂದ್ರಗಳ ಜಾಬ್ ರೋಲ್ ಬದಲಾವಣೆಯ ಬಗ್ಗೆ, ಧೂಳಖೇಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಚಡಚಣ ಪಟ್ಟಣಕ್ಕೆ ಸ್ಥಳಾಂತರಿಸುವ ಕುರಿತು, ಎನ್.ಟಿ.ಪಿ.ಸಿ ಕೂಡಗಿ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಜಯಪುರ ಜೊತೆ ಒಡಂಬಡಿಕೆ, ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿ ಸ್ಥಳ ಬದಲಾವಣೆ ಮಾಡುವ ವಿಷಯಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹೀರೆಮಠ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.