ಖಾನಾಪುರ: ತಾಲೂಕಿನ ನಂದಗಡದ ಮಹಾಲಕ್ಷ್ಮೀದೇವಿ ಜಾತ್ರೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ ಕೇಸರಿ ಖ್ಯಾತಿ ಪೈಲ್ವಾನ್ ಶಿವರಾಜ್ ರಕ್ಷೆ ಅವರು ವಿಶ್ವ ಪದಕ ವಿಜೇತ ಜಲೀಲ್ ಇರಾನ್‌ಗೆ ಸೋಲುಣಿಸಿ ಪ್ರಥಮ ಸ್ಥಾನ ಪಡೆದರು.
ಮಹಾತ್ಮ ಗಾಂಧಿ ಕಾಲೇಜಿನ ಮುಂಭಾಗದ ಕ್ರೀಡಾಂಗಣದಲ್ಲಿ ಸೋಮವಾರ ರೋಮಾಂಚನಕಾರಿ ಕುಸ್ತಿಯಲ್ಲಿ ಶಿವರಾಜ್ ರಕ್ಷೆಯು ಜಲೀಲ್ ಇರಾನ್‌ಗೆ ಒಂದು ನಿಮಿಷದಲ್ಲೇ ಸೋಲಿಸಿದರು. ಇರಾನ್‌ಗೆ ಸ್ಥಿರತೆ ಕಾಯ್ದುಕೊಳ್ಳಲು ಅವಕಾಶ ನೀಡದೆ ಚಾಣಾಕ್ಷತೆಯಿಂದ ಆಟವಾಡಿ ಗೆಲುವು ತಮ್ಮದಾಗಿಸಿಕೊಂಡರು. ಎರಡನೇ ಪಂದ್ಯದಲ್ಲಿ ವಿಶ್ವ ಪದಕ ವಿಜೇತ ಆಶಿಶ್ ಹೂಡಾ ಹಾಗೂ ಮಹಾರಾಷ್ಟ್ರ ಕೇಸರಿ ಪಥ್ವಿರಾಜ್ ಪಾಟೀಲ್ ಜತೆಯಾಡಿದರು. ಇಪ್ಪತ್ತುಗಳ ರೋಚಕ ಪಂದ್ಯದಲ್ಲಿ ಹೆಚ್ಚು ಅಂಕ ಗಳಿಸಿದ ಪಾಟೀಲ ವಿಜಯದ ನಗೆ ಬೀರಿದರು.
ಮೂರನೇ ಪಂದ್ಯವು ಮಹಾರಾಷ್ಟ್ರದ ಉಪ ಕೇಸರಿ ಪ್ರಕಾಶ ಬಂಕರ್ ಹಾಗೂ ಹರಿಯಾಣ ಕೇಸರಿ ಪವನ್ ಕುಮಾರ್ ನಡುವೆ ಜರುಗಿತು. ಅರ್ಧತಾಸು ಹೋರಾಟ ಮಾಡಿ ಪ್ರಕಾಶ ಗೆದ್ದರು. ನಾಲ್ಕನೇ ಸ್ಥಾನಕ್ಕಾಗಿ ಶ್ರೇಷ್ಠ ಭಾರತ್ ಕೇಸರಿ ಮೌಲಿ ಜಾಮ್ದಾಡೆ ಮತ್ತು ರಾಷ್ಟ್ರೀಯ ಚಾಂಪಿಯನ್ ವಿಕ್ರಾಂತ್ ಕುಮಾರ್ ನಡುವೆ ಪಂದ್ಯ ನಡೆದು ಡ್ರಾ ಆಯಿತು. ಐದನೇ ಸ್ಥಾನಕ್ಕಾಗಿ ಕಾರ್ತಿಕ್ ಕೇಟ್ ಸರಣಿಯಲ್ಲಿ ಹರಿಯಾಣದ ಸುಮಿತ್‌ನನ್ನು ಕೇಟ್ ಸೋಲಿಸಿ ಗೆಲುವು ದಾಖಲಿಸಿದರು. ಹೀಗೆ ಒಟ್ಟು ಎಂಟು ಪಂದ್ಯಗಳು ಜರುಗಿದವು.
ಮಹಿಳಾ ಕುಸ್ತಿಯಲ್ಲಿ ಮನಸ್ವಿ ಮಜ್ಗಾಂವ್, ಸಮೀಕ್ಷಾ ಯಲ್ಲೂರ್, ಪ್ರಾಂಜಲ್ ಯಲ್ಲೂರ್ ಮತ್ತು ಭಕ್ತಿ ಮೋಡೆಕೋಪ್ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಗೆಲುವು ಪಡೆದರು. ಪಂದ್ಯಗಳು ಸಾವಿರಾರು ಕುಸ್ತಿ ಉತ್ಸಾಹಿಗಳನ್ನು ರಂಜಿಸಿದವು.
ಮಾಜಿ ಶಾಸಕ ಅರವಿಂದ ಪಾಟೀಲ, ಜಾತ್ರಾ ಸಮಿತಿ ಅಧ್ಯಕ್ಷ ಸುಭಾಷ ಪಾಟೀಲ, ಕುಸ್ತಿ ಸಮಿತಿ ಅಧ್ಯಕ್ಷ ಅಶೋಕ ಗೋರ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೂಡೆ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಉಪಾಧ್ಯಕ್ಷ ವಿಷ್ಣು ಕುಂಬಾರ್ಡೇಕರ, ಶಂಕರ ಪಾಟೀಲ, ನಾರಾಯಣ ಗುರವ, ಮಹಾಬಲೇಶ್ವರ್ ಬಂದ್ರೆ, ಸಂತೋಷ ಕಿರ್ಹಲ್ಶಿ, ಸಂದೀಪ ಸಾಂಬ್ರೇಕರ್, ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಗುರವ, ವಲ್ಲಭ ಗುಣಾಜಿ ಕುಸ್ತಿ ನಡೆಸಿಕೊಟ್ಟರು. ಅರ್ಜುನ್ ದೇಸಾಯಿ ಮತ್ತು ನವೀನ್ ಪಾಟೀಲ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದರು.