ಜಿಲ್ಲೆ

ಅಂತಾರಾಷ್ಟ್ರೀಯ ಮಟ್ಟಕ್ಕೆ ಹಳ್ಳಿ ಪ್ರತಿಭೆ

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ, ರಾಜು ಹೊಸಮನಿ ನರಗುಂದ

ನೇಪಾಳದ ಕಠ್ಮಂಡುವಿನಲ್ಲಿ ಅ.18ರಿಂದ 20ರವರೆಗೆ ಜರುಗಲಿರುವ 7ನೇ ಸೌತ್ ಏಷಿಯಾ ಅಟ್ಯಾ-ಪಟ್ಯಾ ಚಾಂಪಿಯನ್​ಶಿಪ್​ನಲ್ಲಿ ಗದಗ ಜಿಲ್ಲೆಯ ಇಬ್ಬರು ಕ್ರೀಡಾ ಸಾಧಕರು ಮಿಂಚಲಿದ್ದಾರೆ.

ಈ ಚಾಂಪಿಯನ್​ಶಿಪ್​ನಲ್ಲಿ ನರೇಗಲ್ಲನ ಮೆಹಬೂಬಿ ಶೇಕಸನದಿ ಹಾಗೂ ನರಗುಂದ ತಾಲೂಕಿನ ವಾಸನ ಗ್ರಾಮದ ಹರ್ಷ ನಡಮನಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಬಾಲ್ಯದ ಗೀಳು: ಅಟ್ಯಾ-ಪಟ್ಯಾ ತಂಡದ ಸದಸ್ಯೆಯಾಗಿರುವ ಮೆಹಬೂಬಿ ಶೇಕಸನದಿ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ಮೆಹಬೂಬಿ ಬಾಲ್ಯದಿಂದಲೇ ನರೇಗಲ್ಲನ ಅಜ್ಜಿಯ ಮನೆಯಲ್ಲಿ (ತಾಯಿಯ ತವರು ಮನೆ) ವಾಸಿಸುತ್ತಿದ್ದಾಳೆ. ಶ್ರೀಅನ್ನದಾನೇಶ್ವರ ಕಾಲೇಜ್​ನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದು, ನೀಟ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾಳೆ.

ಸತತವಾಗಿ ಸೀನಿಯರ್, ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗಗಳಲ್ಲಿ ಒಟ್ಟು 11 ಬಾರಿ ವಿವಿಧ ರಾಜ್ಯಗಳಲ್ಲಿ ಜರುಗಿದ ರಾಷ್ಟ್ರೀಯ ಅಟ್ಯಾ-ಪಟ್ಯಾ ಚಾಂಪಿಯನ್​ಷಿಪ್​ನಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸುವ ಮೂಲಕ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.

2016-17ರಲ್ಲಿ ನಾಗಪುರದಲ್ಲಿ, 2017-18ರಲ್ಲಿ ಧಾರವಾಡದಲ್ಲಿ ಹಾಗೂ 2018-19ರಲ್ಲಿ ಹಿಮಾಚಲ ಪ್ರದೇಶದಲ್ಲಿ ಜರುಗಿದ ಸಬ್ ಜೂನಿಯರ್ ಚಾಂಪಿಯನ್​ಶಿಪ್​ನಲ್ಲಿ ತೃತೀಯ, 2018-19ರಲ್ಲಿ ಒಡಿಶಾದಲ್ಲಿ ಜರುಗಿದ ಜೂನಿಯರ್ ಚಾಂಪಿಯನ್​ಶಿಪ್​ನಲ್ಲಿ ತೃತೀಯ, 2019-20ರಲ್ಲಿ ಚಂಡಿಗಢದಲ್ಲಿ ಜರುಗಿದ ಜೂನಿಯರ್ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗಿದ್ದಾಳೆ. 2016-17ರಲ್ಲಿ ಹೈದರಾಬಾದ್​ನಲ್ಲಿ ಹಾಗೂ 2018-19ರಲ್ಲಿ ಶಿರೂರಿನಲ್ಲಿ ನಡೆದ ಸೀನಿಯರ್ ಚಾಂಪಿಯನ್​ಶಿಪ್​ನಲ್ಲಿ ತೃತೀಯ. 2017-18ರಲ್ಲಿ ಚಂಡಿಗಡದಲ್ಲಿ ಜರುಗಿದ ಫೆಡರೇಷನ್ ಕಪ್​ನಲ್ಲಿ ತೃತೀಯ, 2016-17ರಲ್ಲಿ ಕೇರಳದಲ್ಲಿ ಜರುಗಿದ ಸೌತ್ ಜೋನ್​ನಲ್ಲಿ ದ್ವಿತೀಯ, 2017-18ರಲ್ಲಿ ತಮಿಳುನಾಡಿನಲ್ಲಿ ಜರುಗಿದ ಸೌತ್ ಜೋನ್​ನಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.

7ನೇ ಚಾಂಪಿಯನ್​ಶಿಪ್​ನಲ್ಲಿ ಕರ್ನಾಟಕದಿಂದ ಒಟ್ಟು ನಾಲ್ವರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ನರೇಗಲ್ಲನ ಮೆಹಬೂಬಿ ಶೇಕಸನದಿ ಹಾಗೂ ಹುಬ್ಬಳ್ಳಿಯ ಕೆಂಚಮ್ಮ ಮಾಶೆಟ್ಟಿ, ಬಾಲಕರ ತಂಡದಲ್ಲಿ ನರಗುಂದ ತಾಲೂಕಿನ ವಾಸನದಿಂದ ಹರ್ಷ ನಡುವಿನಮನಿ ಹಾಗೂ ಬೆಳಗಾವಿ ಜಿಲ್ಲೆ ಚಂದರಗಿಯ ಗೋಪಾಲ ಲಮಾಣಿ ಆಯ್ಕೆಯಾಗಿದ್ದಾರೆ.

ಬಾಲ್ಯದಿಂದಲೂ ಕ್ರೀಡೆಗಳಲ್ಲಿ ಸಾಕಷ್ಟು ಆಸಕ್ತಿ ಇದೆ. ಅದಕ್ಕೆ ಪೂರಕವಾಗುವಂತೆ ತರಬೇತುದಾರ ರಫೀಕ್ ರೇವಡಿಗಾರ, ರಾಜ್ಯ ತಂಡದ ತರಬೇತುದಾರ ಕೃಷ್ಣೇಗೌಡ ನಡುಮನಿ ಹಾಗೂ ಭಾರತ ತಂಡದ ತರಬೇತುದಾರ ಲಕ್ಷ್ಮಣ ಲಮಾಣಿಯರ ಪ್ರೋತ್ಸಾಹದ ಫಲವಾಗಿ ಭಾರತ ತಂಡವನ್ನು ಪ್ರತಿನಿಧಿಸುವ ಹಂತಕ್ಕೆ ತಲುಪಿದ್ದೇನೆ. ಚಾಂಪಿಯನ್​ಶಿಪ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತರಬೇತುದಾರರಿಗೆ ಹಾಗೂ ಭಾರತ ತಂಡದ ಗೌರವವನ್ನು ಹೆಚ್ಚಿಸುವೆ. | ಮೆಹಬೂಬಿ ಶೇಕಸನದಿ, ಭಾರತ ತಂಡಕ್ಕೆ ಆಯ್ಕೆಯಾದ ಕ್ರೀಡಾಪಟು.
ಚಿಕ್ಕ ವಯಸ್ಸಿನಿಂದಲೇ ಮೆಹಬೂಬಿ ಅವರಲ್ಲಿ ಆಸಕ್ತಿ ಹಾಗೂ ಶದ್ಧೆಯನ್ನು ಗಮನಿಸಿ, ಆಕೆಗೆ ಅಟ್ಯಾ-ಪಟ್ಯಾ ತರಬೇತಿ ನೀಡುತ್ತ ಬಂದಿದ್ದೇನೆ. ಆಕೆ ಕೂಡ ಉತ್ತಮವಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಇಂದು ಭಾರತ ತಂಡವನ್ನು ಪ್ರತಿನಿಧಿಸುವ ಹಂತಕ್ಕೆ ಬೆಳೆದಿರುವುದು ಸಂತಸ ತಂದಿದೆ. | ಮಹ್ಮದ್ ರಫೀಕ್ ರೇವಡಿಗಾರ, ತರಬೇತುದಾರ, ನರೇಗಲ್ಲ

ಭರವಸೆಯ ಆಟಗಾರ ಹರ್ಷ

ಅಟ್ಯಾ-ಪಟ್ಯಾ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಮತ್ತೊಂದು ಪ್ರತಿಭೆ ನರಗುಂದ ತಾಲೂಕಿನ ವಾಸನ ಹರ್ಷ ಕೃಷ್ಣಗೌಡ ನಡಮನಿ.

ಬಾಲ್ಯದಿಂದಲೇ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ 17 ವರ್ಷದ ಹರ್ಷ ಧಾರವಾಡದ ಹಂಚಿನಮನಿ ಕಾಲೇಜ್​ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾನೆ. ವಾಸನ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಹರ್ಷ ಅವರ ತಂದೆ ಕೃಷ್ಣಗೌಡ ನಡಮನಿ ಅವರ ಮಾರ್ಗದರ್ಶನದಂತೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಅಟ್ಯಾಪಾಟ್ಯಾ ಕ್ರೀಡೆಯಲ್ಲಿ ಮಿಂಚುತ್ತಿದ್ದಾನೆ.

2018 ರಲ್ಲಿ ಹೈದರಾಬಾದ್​ನಲ್ಲಿ ಹಾಗೂ 2019ರಲ್ಲಿ ಇಂದೋರ್​ನಲ್ಲಿ ನಡೆದ ಸಬ್ ಜ್ಯೂನಿಯರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. 2002 ರಲ್ಲಿ ಕೇರಳದ ಕೊಚ್ಚಿ ಮತ್ತು ಪಾಂಡಿಚೇರಿಯಲ್ಲಿ ನಡೆದ ಅಟ್ಯಾಪಟ್ಯಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾನೆ. ಎರಡು ಬಾರಿ ಸಬ್ ಜ್ಯೂನಿಯರ್, ಮತ್ತೆರಡು ಬಾರಿ ಜ್ಯೂನಿಯರ್ ವಿಭಾಗದ ಕರ್ನಾಟಕ ರಾಜ್ಯ ತಂಡದಿಂದ ಸ್ಪರ್ಧಿಸಿ ವಿಶೇಷ ಸಾಧನೆಗೈದಿದ್ದಾನೆ.

ಅಟ್ಯಾ-ಪಟ್ಯಾದಲ್ಲಿ ಹೆಚ್ಚಿನ ಆಸಕ್ತಿ ಇದ್ದಿದ್ದರಿಂದ ಧಾರವಾಡದ ಡಾ.ವಿ.ಟಿ. ಪಾಟೀಲ ಹಾಗೂ ಲಕ್ಷ್ಮಣ ಲಮಾಣಿ ಗುರುಗಳಿಬ್ಬರು ನೀಡಿದ ವಿಶೇಷ ತರಬೇತಿ ಮತ್ತು ನಮ್ಮ ತಂದೆ-ತಾಯಿಯ ಪ್ರೋ›ತ್ಸಾಹ, ಆಶೀರ್ವಾದದಿಂದ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸದಾವಕಾಶ ದೊರೆತಿದೆ. | ಹರ್ಷ ನಡಮನಿ, ಕ್ರೀಡಾಪಟು