ಜಿಲ್ಲೆ

ಅಂತಾರಾಜ್ಯ ನಟೋರಿಯಸ್ ಗ್ಯಾಂಗ್ ಅರೆಸ್ಟ್

ಚಿತ್ರದುರ್ಗ: ಅಧಿಕಾರಿಗಳ ಸೋಗಿನಲ್ಲಿ ಮನೆಗಳಿಗೆ ನುಗ್ಗಿ ನಗ-ನಗದು ದೋಚಿ ಪರಾರಿಯಾಗುತ್ತಿದ್ದ ಅಂತಾರಾಜ್ಯ ನಟೋರಿಯಸ್ ಗ್ಯಾಂಗ್‌ನ್ನು ಬಂಧಿಸಲಾಗಿದೆ ಎಂದು ಚಿತ್ರದುರ್ಗ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಳ್ಳಕೆರೆ ವಾಸವಿ ಕಾಲನಿ ಗೀತಾಲಕ್ಷ್ಮೀ ಅವರ ಮನೆಗೆ ಕಳೆದ ಫೆಬ್ರವರಿ 22ರಂದು ಬೆಳಗ್ಗೆ 11.30ರ ಹೊತ್ತಿಗೆ ನುಗ್ಗಿದ್ದ ಈ ಗ್ಯಾಂಗ್, ಗೀತಾಲಕ್ಷ್ಮಿ ಮತ್ತು ಅವರ ಅತ್ತೆ ಸಾವಿತ್ರಮ್ಮ ಅವರಿಗೆ ನಾವು ಇನ್‌ಕಂಟ್ಯಾಕ್ಸ್ ಅಧಿಕಾರಿಗಳು ಎಂದು ಬೆದರಿಸಿ, ಅಂದಾಜು 8.50 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.

ಪ್ರಕರಣದ ತನಿಖೆಗೆ ಚಳ್ಳಕೆರೆ ಠಾಣೆ ಪಿಐ ಆರ್.ಎಫ್.ದೇಸಾಯಿ, ಪಿಎಸ್‌ಐ ಶಿವರಾಜ್, ನಾಯಕನಹಟ್ಟಿ ಪಿಎಸ್‌ಐ ದೇವರಾಜ್, ಪಿಎಸ್‌ಐ ಶಿವಕುಮಾರ್ ನೇತೃತ್ವದಲ್ಲಿ ರಚಿಸಿದ್ದ 4 ಪ್ರತ್ಯೇಕ ತಂಡಗಳು ದುಷ್ಕರ್ಮಿಗಳ ಜಾಡು ಹಿಡಿದು 10 ಟೋಲ್‌ಗೇಟ್, 100 ವಸತಿಗೃಹಗಳು, 30 ಪೆಟ್ರೋಲ್ ಬಂಕ್‌ಗಳು, 45 ಡಾಬಾಗಳು ಹಾಗೂ ಅಂದಾಜು 300 ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿತ್ತು.

ಆಂಧ್ರದ ಹಲವು ನಗರ, ಪಟ್ಟಣ, ಗ್ರಾಮಗಳು ಹಾಗೂ ತಮಿಳುನಾಡಿನ ನಂಗ್ಲಿ ಮೊದಲಾದೆಡೆ ಸುತ್ತಾಡಿದ್ದಲ್ಲದೆ ಆಂಧ್ರದ ಕಮ್ಮಂ ಜಿಲ್ಲೆ ವೈರಾ ಠಾಣೆ ವ್ಯಾಪ್ತಿಯಲ್ಲಿ ಫೆ.12ರಂದು ಪೊಲೀಸ್ ಸಮವಸ್ತ್ರದಲ್ಲಿ ಮನೆಯೊಂದಕ್ಕೆ ನುಗ್ಗಿ ದೋಚಿದ್ದ ಪ್ರಕರಣದ ಮಾಹಿತಿ ಪಡೆದು ಅಲ್ಲಿನ ಪೊಲೀಸರೊಂದಿಗೆ ಜಂಟಿ ತನಿಖೆ ಮುಂದುವರಿಸಿದ್ದರು.

ಈ ಸಂದರ್ಭದಲ್ಲಿ ವೈರಾ ಪೊಲೀಸರು ಆರೋಪಿಗಳಾದ ಗುಂಟೂರಿನ ರಾಯಪಾಟಿ ವೆಂಕಯ್ಯ(49), ನಾರಾಯಣಪುರಂನ ಶೇಖ್‌ನ ಗೂಲ್‌ಮೀರಾ(25), ತಮಿಳುನಾಡು ಮಾಣಿಕ್ಯಪಾಳ್ಯಂನ ಮುತ್ತುರಾಜ್(32) ಹಾಗೂ ವೀರಪ್ಪನ್‌ಸತ್ರಂನ ವಿಜಯ್‌ಕುಮಾರ್(30)ರನ್ನು ಬಂಧಿಸಿ, ಅವರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರು, ನಕಲಿ ನಂಬರ್‌ಪ್ಲೇಟ್, ದೋಚಿದ್ದ ಮಾಲನ್ನು ವಶಕ್ಕೆ ಪಡೆದಿದ್ದರು.

ಚಳ್ಳಕೆರೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಾಡಿವಾರೆಂಟ್ ಮೇಲೆ ಕರೆ ತಂದು ತನಿಖೆ ಮುಂದುವರಿಸಲಾಗುವುದು. ಆರೋಪಿಗಳ ವಿರುದ್ಧ ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿ ವೆಂಕಯ್ಯ ವಿರುದ್ಧ 31, ಶೇಖ್-11, ಮುತ್ತು-12 ಹಾಗೂ ವಿಜಯ್ ವಿರುದ್ಧ 5 ಪ್ರಕರಣಗಳಿವೆ. ಕುಖ್ಯಾತ ಆರೋಪಿಗಳು ತಮ್ಮ ಕೃತ್ಯಗಳಿಗೆ ಪ್ರತಿರೋಧ ವ್ಯಕ್ತವಾದರೆ ಎಂಥ ಹೀನಕೃತ್ಯ ಎಸಗುವುದಕ್ಕೂ ಹಿಂಜರಿಯುತ್ತಿರಲಿಲ್ಲ. ವೆಂಕಯ್ಯ ಹಲವು ಭಾಷೆಗಳನ್ನು ಅರಿತಿದ್ದ ಎಂದು ಎಸ್‌ಪಿ ವಿವರಿಸಿದರು.

ಹಣ ಕಳವು, ಬಂಧನ

ಹಿರಿಯೂರಿನಲ್ಲಿ ಮಾ.4 ರಂದು ಬೈಕ್‌ನ ಸೈಡ್‌ಬ್ಯಾಗಿನಲ್ಲಿದ್ದ 4.73 ಲಕ್ಷ ರೂ.ಕಳ್ಳತನ ಮಾಡಿ ಪರಾರಿಯಾಗಿದ್ದ ಆಂಧ್ರ ಪ್ರದೇಶದ ಓಜಿಕೊಪ್ಪಂನ ಎಂ. ಶ್ರೀನಿವಾಸಲು(50)ನನ್ನು ಬಂಧಿಸಿ, ಆತನಿಂದ 4.03 ಲಕ್ಷ ರೂ.ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಹಿರಿಯೂರಿನ ಕೆ. ವೇಲುಸ್ವಾಮಿ ಅವರು, ಬ್ಯಾಂಕಿಂದ ಹಣ ಬಿಡಿಸಿಕೊಂಡು ಟಿ ಸ್ಟಾಲ್‌ಗೆ ತೆರಳಿದ್ದಾಗ ಈ ಕೃತ್ಯ ನಡೆದಿತ್ತು. ತಲೆಮರೆಸಿಕೊಂಡಿರುವ ಶಿವ ಮತ್ತು ರಾಜೇಶ್ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ಪ್ರಕರಣದ ಭೇದಿಸಿದ ಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡಕ್ಕೆ ಹಾಗೂ ಕಾನೂನು ಬಾಹಿರವಾಗಿ ಚಿತ್ರದುರ್ಗದಲ್ಲಿ ಸಿರಪ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಸಿಇಎನ್ ಠಾಣೆ ಪಿಐ ಎನ್. ವೆಂಕಟೇಶ್ ಮತ್ತವರ ತಂಡಕ್ಕೆ ನಗದು ಪುರಸ್ಕಾರ ಘೋಷಿಸಲಾಗಿದೆ. ವೈದ್ಯರ ಸಲಹೆ ಇಲ್ಲದೆ ಟಾನಿಕ್, ಸಿರಪ್ ಮಾರಾಟ ಜಾಲದ ಇನ್ನಷ್ಟು ತನಿಖೆ ನಡೆಯಲಿದೆ ಎಂದರು.

ಸಿಸಿ ಕ್ಯಾಮರಾ ಅಳವಡಿಕೆ

ಅಪಘಾತಗಳ ತಡೆಗೆ ಹೆದ್ದಾರಿಯಲ್ಲಿ ಗಸ್ತುಪಡೆ ಚುರುಕಗೊಳಿಸಲಾಗುವುದು. ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ನಗರ ಸಹಿತ ಜಿಲ್ಲಾದ್ಯಂತ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಕ್ರಮವಹಿಸಲಾಗಿದೆ. ಅಂಗಡಿ ಮುಂಗಟ್ಟುಗಳ ಮಾಲೀಕರಿಗೂ ಕ್ಯಾಮರಾಗಳನ್ನು ಅಳವಡಿಸಿಕೊಳ್ಳುವಂತೆ ನೋಟಿಸ್ ಕೊಡಲಾಗಿದೆ. ಚಳ್ಳಕೆರೆಯ ಎರಡು ಹಣ ಕಳವು ಪ್ರಕರಣಗಳ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.