ಬೀದರ್: ಜನ ವಾಸಿಸುವ ಮನೆಗಳನ್ನೇ ಟಾರ್ಗೆಟ್ ಮಾಡಿ ಕನ್ನ ಹಾಕುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸುರೇಶ ಯಲ್ಲಪ್ಪ ಎಂಬಾತನನ್ನು ಸೋಮವಾರ ಬಂಧಿಲಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಆಗಸ್ಟ್ ಕೊನೇ ವಾರದಲ್ಲಿ ಇಲ್ಲಿನ ಓಲ್ಡ್ ಆದರ್ಶ ಬಡಾವಣೆ ಹಾಗೂ ಜ್ಯೋತಿ ಕಾಲನಿಯಲ್ಲಿ ಸರಣಿ ಕಳ್ಳತನ ನಡೆದಿದ್ದವು. ಇದರಿಂದ ಸ್ಥಳೀಯರು ರಾತ್ರಿ ಇಡೀ ಜಾಗರಣೆ ಮಾಡುವಂಥ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಜ್ಯೋತಿ ಮತ್ತು ಆದರ್ಶ ಕಾಲನಿಗಳಲ್ಲಿ ವಾರದೊಳಗೆ ಒಂಬತ್ತು ಕಳವು ಪ್ರಕರಣ ವರದಿಯಾಗಿವೆ. ಮೂರು ಮನೆ ಕಳ್ಳತನ ಹಾಗೂ 6 ಕಳ್ಳತನಕ್ಕೆ ಯತ್ನ ನಡೆದಿವೆ. ಪ್ರಕರಣ ಸಂಬಂಧ ವಿಶೇಷ ತಂಡ ರಚಿಸಿ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಸಲಾಗಿದೆ ಎಂದು ಎಸ್ಪಿ ಡೆಕ್ಕಾ ಕಿಶೋರಬಾಬು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ಪ್ರಕರಣಗಳನ್ನು ಒಬ್ಬನೇ ಮಾಡಿದ್ದು, 10 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬಂತ ನಟೋರಿಯಸ್ ಕ್ರಿಮಿನಲ್ ಇದ್ದು, ಅಂತಾರಾಜ್ಯ ಕಳ್ಳನಾಗಿದ್ದಾನೆ. ಈತನ ವಿರುದ್ಧ ಸೊಲ್ಲಾಪುರ, ರಾಯಚೂರು, ಗದಗ, ಹುಬ್ಬಳ್ಳಿ, ಧಾರವಾಡ, ಬಾದಾಮಿ, ಬಾಗಲಕೋಟೆ, ವಿಜಯಪುರ ನಗರಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.
ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಕೆ.ಎಂ. ಸತೀಶ್ ಮಾರ್ಗದರ್ಶನದಲ್ಲಿ ರಚಿಸಿದ ವಿಶೇಷ ತಂಡದಲ್ಲಿ ಗಾಂಗಂಜ್ ಸಿಪಿಐ ಜಿ.ಎಸ್. ಬಿರಾದಾರ್, ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ, ನ್ಯೂಟೌನ್ ಸಿಪಿಐ ಕಪಿಲ್, ಪಿಎಸ್ಐಗಳಾದ ಸೈಯದ್ ಪಟೇಲ್, ದಯಾನಂದ ಮಡಿವಾಳ ಹಾಗೂ ಸಿಬ್ಬಂದಿ ಆರೀಫ್, ನವೀನ್, ಅನೀಲ್, ಇರ್ಫಾನ್, ಗಂಗಾಧರ, ಪ್ರವೀಣ, ಶ್ರೀನಿವಾಸ ಇದ್ದಾರೆ. ವಿಶೇಷ ತಂಡಕ್ಕೆ ನಗದು ಬಹುಮಾನವನ್ನು ಎಸ್ಪಿ ವಿತರಿಸಿ ಬೆನ್ನು ತಟ್ಟಿದರು.
ತಾಲೂಕು ಕೇಂದ್ರದಲ್ಲಿ ಸಿಸಿ ಕ್ಯಾಮರಾ: ಅಪರಾಧ ನಿಯಂತ್ರಣ ಸೇರಿ ವಿವಿಧ ಕಾನೂನುಬಾಹಿರ ಚಟುವಟಿಕೆ ನಡೆಸುವವರ ಮೇಲೆ ನಿಗಾ ಇಡಲು ಜಿಲ್ಲಾ ಕೇಂದ್ರ ಬೀದರ್ನ ಜನನಿಬಿಡ ಪ್ರದೇಶಗಳಲ್ಲಿ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇದೇ ರೀತಿ ಎಲ್ಲ ತಾಲೂಕು ಕೇಂದ್ರಗಳಲ್ಲೂ ಕ್ಯಾಮರಾ ಅಳವಡಿಸಲಾಗುವುದು ಎಂದು ಎಸ್ಪಿ ಡೆಕ್ಕಾ ಕಿಶೋರಬಾಬು ತಿಳಿಸಿದರು. ನಗರದ 90 ಕಡೆ ಕ್ಯಾಮರಾ ಅಳವಡಿಸಿದ್ದು, ಬರುವ ದಿನಗಳಲ್ಲಿ ಇನ್ನೂ 60 ಸ್ಥಳಗಳಲ್ಲಿ ಕೂಡಿಸಲಾಗುವುದು. ತಾಲೂಕು ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಕಳ್ಳರ ಬಂಧನ, ಸಂಚಾರ ನಿಯಮ ಉಲ್ಲಂಘನೆ ಸೇರಿ ಶಂಕಿತರ ಮೇಲೆ ನಿಗಾ ಇರಿಸಲು ಪೂರಕವಾಗಿ ಕ್ಯಾಮರಾಗಳು ಕೆಲಸ ಮಾಡಲಿವೆ ಎಂದರು.
ನಿಟ್ಟುಸಿರು ಬಿಟ್ಟ ಜನ: ಮನೆಗಳ ಸರಣಿ ಕಳ್ಳತನದಿಂದ ಭಯಗೊಂಡಿದ್ದ ಜ್ಯೋತಿ ಮತ್ತು ಆದರ್ಶ ಕಾಲನಿ ಜನ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಜನ ವಾಸಿಸುವ ಮನೆಗಳನ್ನೇ ಟಾರ್ಗೆಟ್ ಮಾಡಿ ಒಂದು ವಾರ ನಿರಂತರ ಕಳವು ಮಾಡಿದವನನ್ನು ಬಂಸಿರುವ ಪೊಲೀಸರ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಣಿ ಕಳ್ಳತನ ಆತಂಕ ಹಾಗೂ ಯಾವಾಗ ಕಳ್ಳರು ಬರುತ್ತಾರೋ ಎಂದು ರಾತ್ರಿ ಇಡೀ ಜಾಗರಣೆ ಮಾಡುವಂಥ ಸ್ಥಿತಿ ಕುರಿತು ವಿಜಯವಾಣಿ ಸೆ.3ರ ಸಂಚಿಕೆಯಲ್ಲಿ `ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ' ತಲೆಬರಹದಡಿ ವರದಿ ಪ್ರಕಟಿಸಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಕಿಶೋರಬಾಬು ವಿಶೇಷ ತಂಡ ರಚಿಸಿ ಕಳ್ಳನನ್ನು ಬಂಸಿದ್ದಾರೆ.