ಜಿಲ್ಲೆ

ಅಂತರ್ಜಾಲ ಮೊಬೈಲ್‌ನಿಂದ ಮಕ್ಕಳ ಮನಸ್ಸು ಹಾಳು: ಪ್ರೊ.ಆರ್.ಶಿವಪ್ಪ ಕಳವಳ

ಮೈಸೂರು: ಜಾಗತೀಕರಣ ಯುಗದಲ್ಲಿ ಅಂತರ್ಜಾಲ, ಮೊಬೈಲ್, ಸಾಮಾಜಿಕ ಜಾಲತಾಣಗಳು ಮಕ್ಕಳ ಮನಸ್ಸನ್ನು ಕೆಡಿಸುತ್ತಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಕಳವಳ ವ್ಯಕ್ತಪಡಿಸಿದರು.

ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2022-23ನೇ ಸಾಲಿನ ಪಾಲಕರ ಸಮಾವೇಶದಲ್ಲಿ ಮಾತನಾಡಿ, ನವ ಸಂವಹನ ಮಾಧ್ಯಮಗಳಿಂದ ಮಕ್ಕಳು ದೂರ ಇರಬೇಕು. ಪಾಲಕರು ಈ ಬಗ್ಗೆ ಗಮನಹರಿಸಬೇಕು. ಓದಿನ ಕಡೆಗೆ ಮಕ್ಕಳು ಆಸಕ್ತಿ ವಹಿಸುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳ ಜೀವನದಲ್ಲಿ ಪಾಲಕರ ಪಾತ್ರ ಅಗಾಧ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ಅವನ ಬಾಲ್ಯದ ಅನುಭವಗಳ ಮೇಲೆ ನಿರ್ಮಿತವಾಗಿರುತ್ತದೆ. ಆದ್ದರಿಂದ ತಂದೆ-ತಾಯಂದಿರು ಮನೆಯ ಹಾಗೂ ಸುತ್ತಮುತ್ತಲಿನ ಪರಿಸರವನ್ನು ನಿರ್ಮಲವಾಗಿಟ್ಟು, ಮಕ್ಕಳ ಮನಸ್ಸಿಗೆ ಯಾವುದೇ ಘಾಸಿಯಾಗದಂತೆ ನೋಡಿಕೊಳ್ಳಬೇಕು ಎಂದರು.

ತಂದೆ ತಾಯಿಯರಿಗೆ ಮಕ್ಕಳೇ ಜೀವ. ಅವರ ಭವಿಷ್ಯಕ್ಕಾಗಿ ಜೀವನವನ್ನೇ ಧಾರೆ ಎರೆಯುತ್ತಿದ್ದಾರೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಮಕ್ಕಳಿಗೆ ಆದರ್ಶ, ನಡವಳಿಕೆ, ವ್ಯಕ್ತಿತ್ವ ವಿಕಸನ, ಕೌಶಲ ವಿದ್ಯಾಸಂಸ್ಥೆಗಳಿಂದ ದೊರಕುತ್ತದೆ. ಮುಂದಿನ ಭವಿಷ್ಯವನ್ನು ನೆಲೆಗೊಳಿಸುವಲ್ಲಿ ಗುರುಗಳ ಪಾತ್ರ ಹೆಚ್ಚಾಗಿರುತ್ತದೆ. ಒಳ್ಳೆಯ ಮೇಷ್ಟ್ರು ಉತ್ತಮ ವಿದ್ಯಾರ್ಥಿಯಾಗಿರಬೇಕು. ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಒಡನಾಟ, ಲವಲವಿಕೆ ಮುಖ್ಯವಾಗುತ್ತದೆ ಎಂದರು.

ಜಾಗತೀಕರಣ, ಕಂಪ್ಯೂಟರೀಕರಣ ಹಾಗೂ ಡಿಜಿಟಲೀಕರಣ ಯುಗದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಮಕ್ಕಳನ್ನು ಕೌಶಲಯುತ ತರಬೇತಿ ಪಡೆಯಲು ಮತ್ತು ಮೌಲ್ಯ ಬಿತ್ತಲು ಸಹಕಾರಿಯಾಗಿದೆ ಎಂದರು.

ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್ ಮಾತನಾಡಿ, ಶಿಕ್ಷಣದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಮೌಲ್ಯಾಧಾರಿತ ಹಾಗೂ ಕೌಶಲಾಧಾರಿತ ಕಲಿಕೆಗೆ ಆದ್ಯತೆ ನೀಡಿದೆ. ಪಾಲಕರು ಮಕ್ಕಳ ಮನಸ್ಸನ್ನು ಅರಿತು ಸ್ನೇಹಿತರಂತೆ ವರ್ತಿಸಿ, ಮಕ್ಕಳು ಕ್ರಿಯಾಶೀಲರಾಗುವತ್ತ ಪ್ರೋತ್ಸಾಹ ನೀಡಬೇಕು ಎಂದರು.

ಪಾಲಕರ ಸಂಘದ ನಿರ್ಗಮಿತ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಮಾತನಾಡಿದರು. ಸಂಘದ ಸಂಚಾಲಕಿ ಡಾ.ವಿನೋದಮ್ಮ, ಕಾರ್ಯದರ್ಶಿ ಪಿ.ಎ.ವೇಣುಗೋಪಾಲ್, ನಿರ್ವಹಣಾಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಬಿ.ಆರ್.ಅನಿತಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ಮಹಾಜನ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರವಿಕುಮಾರ್ ಇನ್ನಿತರರು ಇದ್ದರು

ನೇಮಕ: ಪಾಲಕರ ಕಾರ್ಯಕಾರಿ ಮಂಡಳಿಯ 2022-23ನೇ ಸಾಲಿಗೆ ಅಧ್ಯಕ್ಷೆ ಆಗಿ ಪಿ.ಸುಮಲತಾ, ಕಾರ್ಯದರ್ಶಿಯಾಗಿ ಕೆ.ಎಸ್.ವಿನಿತಾ, ಸದಸ್ಯರಾಗಿ ಮಂಜುಳಾ ರಾವ್, ರೂಪಶ್ರೀ ಮತ್ತು ರಾಜು ನೇಮಕಗೊಂಡರು.