ಚಿತ್ರದುರ್ಗ: ಕೃಷಿ ಹೊರತುಪಡಿಸಿ, ವಾಣಿಜ್ಯ, ಕೈಗಾರಿಕೆ ಹಾಗೂ ಗಣಿಗಾರಿಕೆ ಸಂಬಂಧಿಸಿದ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆಯಲು ಜಿಲ್ಲಾ ಅಂರ್ತಜಲ ಸಮಿತಿಯಿಂದ ಅನುಮತಿ ಕಡ್ಡಾಯವೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು. ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಅಂರ್ತಜಲ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ಸಮಿತಿ ಅಧಿಕೃತ ನೋಂದಣಿಯಾದ ಬೋರ್‌ವೆಲ್ ಕೊರೆಯವ ವಾಹನ ಗಳನ್ನು ಕೊಳವೆ ಬಾವಿ ಕೊರೆಸಲು ಬಳಸಬೇಕು. ನೋಂದಣಿ ಅವಧಿ ಪೂರ್ಣಗೊಂಡಿದ್ದರೆ ವಾಹನ ಮಾಲಿಕರು, ಕೂಡಲೇ ನವೀಕರಿಸಿ ಕೊಳ್ಳಬೇಕು.
ವಾಣಿಜ್ಯ ಸ್ಥಳಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಜಿಲ್ಲಾ ಅಂರ್ತಜಲ ಸಮಿತಿಯಿಂದ ಎನ್‌ಒಸಿ ಪಡೆದ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಖಚಿತ ಪಡಿಸಿಕೊಳ್ಳಬೇಕು. ಅನುಪಯುಕ್ತ ಹಾಗೂ ವಿಫಲ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆಯೇ ಎಂಬುದರ ಬಗ್ಗೆ ತಹಸೀಲ್ದಾರ್,ತಾಪಂ ಇಒ ಹಾಗೂ ಪಿಡಿಒಗಳು ಪರಿಶೀಲಿಸಬೇಕೆಂದರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸವನಗೌಡ ಪಾಟೀಲ್, ಹಿರಿಯ ಭೂ ವಿಜ್ಞಾನಿ ಬಸಂತ್ ಮತ್ತಿತರ ಅಧಿಕಾರಿಗಳಿದ್ದರು.