ಜಿಲ್ಲೆ

ಅಂತರ್ ರಾಜ್ಯ, ಜಿಲ್ಲಾ ಸಂಚಾರಕ್ಕೆ ನಿರ್ಬಂಧ - ಲಕ್ಷ್ಮಣ ನಿಂಬರಗಿ

Belagavi

ಬೆಳಗಾವಿ: ಮೇ 10ರಿಂದ ಲಾಕ್‌ಡೌನ್ ಜಾರಿಯಾಗುವ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ನಗರದ ಎಸ್ಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಮಾರ್ಗಸೂಚಿ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾನೂನು ವಿಪತ್ತು
ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಾಹನ ತರುವಂತಿಲ್ಲ: ಸರ್ಕಾರ ನಿಗದಿಪಡಿಸಿದ ಸಮಯದೊಳಗಷ್ಟೇ ಅಗತ್ಯ ವಸ್ತು ಖರೀದಿಸಬೇಕು. ಮನೆ ಸಮೀಪದಲ್ಲಿರುವ ಹಾಲಿನ ಅಂಗಡಿ, ಔಷಧ ಅಂಗಡಿ, ತರಕಾರಿ, ದಿನಸಿ ವಸ್ತು ಖರೀದಿಸಲು ನಡೆದುಕೊಂಡು ಹೋಗಬೇಕು. ಅಲ್ಲದೆ, ದೈಹಿಕ ಅಂತರ ಕಾಪಾಡಿಕೊಂಡು ಖರೀದಿಸಬೇಕು. ಯಾವುದೇ ಕಾರಣಕ್ಕೂ ಬೈಕ್, ಕಾರ್‌ಗಳಲ್ಲಿ ರಸ್ತೆಗೆ ಅನವಶ್ಯಕವಾಗಿ ಬರಬಾರದು. ಕೇವಲ ತುರ್ತು ಸೇವೆಗಳಾದ ಆರೋಗ್ಯ, ಕರೊನಾ ಸೋಂಕಿತರಿಗೆ, ಗರ್ಭಿಣಿಯರಿಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಇನ್ನುಳಿದವರಿಗೆ ಯಾವುದೇ ರೀತಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಒಂದು ವೇಳೆ ಅನಗತ್ಯವಾಗಿ ರಸ್ತೆಗೆ ಇಳಿಯುವ ವಾಹನಗಳನ್ನು ಸೀಜ್ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜನತೆಗೆ ತಿಳಿಸಿದ್ದಾರೆ.

ಅಂತ್ಯಕ್ರಿಯೆಗೆ 5 ಜನ: ಮದುವೆಗಳಿಗೆ ಕೇವಲ 40 ಜನ ಹಾಗೂ ಅಂತ್ಯಕ್ರಿಯೆಗೆ ಕೇವಲ ಐದು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮ ರದ್ದು ಮಾಡಲಾಗಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

112 ಸಂಖ್ಯೆಗೆ ಕರೆಮಾಡಿ: ಜಿಲ್ಲೆಯಲ್ಲಿ ಎಲ್ಲಿಯಾದರೂ ರೆಮ್ಡೆಸಿವಿರ್, ಆಕ್ಸಿಜನ್ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಯ ‘ಡಯಲ್ 112’ಕ್ಕೆ ತಿಳಿಸಬೇಕು. ಯಾವುದೇ ಸಹಾಯ ಬೇಕಿದ್ದರೂ 112 ನಂಬರ್ ಸಂಪರ್ಕಿಸಿ. ಕರೊನಾ ವಿರುದ್ಧ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು.

ಪೊಲೀಸರಿಗೂ ಕುಟುಂಬವಿದೆ ಎನ್ನುವುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಸಮಾಜ ಸೇವೆಯೇ ಪೊಲೀಸರ ಮುಖ್ಯ ಧ್ಯೇಯ. ಜನರ ಆರೋಗ್ಯ ಹಾಗೂ ಸಮಾಜದ ಆರೋಗ್ಯ ಕಾಪಾಡುವುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಹೀಗಾಗಿ ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಎಸ್ಪಿ ನಿಂಬರಗಿ ಮನವಿ ಮಾಡಿದರು.