ಜಿಲ್ಲೆ

ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಾಗಾರ

ವಿಜಯಪುರ: ಮಹಿಳೆಯು ತಾಯಿಯಾಗಿ, ಮಡದಿಯಾಗಿ, ಸಹೋದರಿಯಾಗಿ, ಮಗಳಾಗಿ ಹೀಗೆ ನಾನಾ ರೀತಿಯಲ್ಲಿ ಗಂಡಿನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾಳೆ. ಇಂತಹ ಮಹಿಳೆಯನ್ನು ನಾವು ಗೌರವಿಸಬೇಕು. ಆದರೆ ಪೂಜ್ಯನೀಯ ಹೆಣ್ಣಿನ ಮೇಲೆ ವಿವಿಧ ದೌರ್ಜನ್ಯಗಳು ನಡೆಯುತ್ತಿರುವುದು ಶೋಚನೀಯ. ಹೆಣ್ಣು ಮಕ್ಕಳ ದೌರ್ಜನ್ಯ ತಡೆಗೆ ಸಾಮುದಾಯಿಕ ಪ್ರಯತ್ನವೂ ಅತ್ಯಗತ್ಯ ಎಂದು ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಅವರು ಹೇಳಿದರು. ವಿಜಯಪುರದ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿಂದು ನಡೆದ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಕಾಯ್ದೆ-2012, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ಆರ್.ಟಿ.ಇ ಕಾಯ್ದೆ-2009, ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಕುರಿತು ಕಾರ್ಯಾಗಾರ ಹಾಗೂ ರಾಷ್ಟ್ರೀಯ ಐಕ್ಯತೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಮಾತನಾಡುತ್ತಾ ಸರ್ಕಾರದಿಂದ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹತ್ತಾರು ಕಠಿಣ ಕಾನೂನುಗಳನ್ನು ರೂಪಿಸಿದೆಯಾದರೂ ದೌರ್ಜನ್ಯಗಳು ನಿಂತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ರು. ಮಹಿಳೆ ದೌರ್ಜನ್ಯಕ್ಕೊಳಗಾದರೆ ಅಂತಹವರಿಗೆ ಸರ್ಕಾರದಿಂದ ಕಾನೂನುರೀತ್ಯ ಸಿಗಬಹುದಾದ ಸೌಲಭ್ಯಗಳ ಬಗ್ಗೆಯೂ ಅಗತ್ಯ ಅರಿವು ಮೂಡಿಸಬೇಕು. ಸಾರ್ವಜನಿಕರಿಗೂ ಈ ಕುರಿತು ಅಗತ್ಯ ಮಾಹಿತಿ ಒದಗಿಸಬೇಕು ಎಂದು ಅವರು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಜಯಪುರ, ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರಿನ, ಸಮಗ್ರ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀಮತಿ ಭಾರತಿ ವಾಳ್ವೆಕರ ಅವರು ಮಾತನಾಡಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರೆಡು ಅವಿರತವಾಗಿ ಶ್ರಮಿಸುತ್ತಿದ್ದು, ಸಂವಿಧಾನಬದ್ಧ ಮಕ್ಕಳ ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವ ಹಕ್ಕುಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲರ ಪಾತ್ರವೂ ಪ್ರಮುಖವಾಗಿದೆ ಎಂದು ಹೇಳಿದರು. ಅದರಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸುವ ಮೂಲಕ ವ್ಯಾಪಕವಾಗಿ ಪ್ರಚುರ ಪಡಿಸಬೇಕೆಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ ಚವ್ಹಾಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ, ಡಿ ವೈ ಎಸ್ ಪಿ ಟಿ ಎಸ್ ಸುಲ್ಫಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.