ಜಿಲ್ಲೆ

ಅಂತರರಾಷ್ಟ್ರೀಯ ಶೈಕ್ಷಣಿಕ ಪದ್ಧತಿ ಅಳವಡಿಸಿಕೊಂಡರೆ ಪ್ರಗತಿ

ಹಾಸನ: ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಮಾತ್ರ ತಾಂತ್ರಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಏಳಿಗೆ ಕಾಣಲು ಸಾಧ್ಯ ಎಂದು ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ಹೇಳಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆಸ್ಟ್ರೇಲಿಯಾದ ಎಂಪ್ಲಾಯಿಬಿಲಿಟಿ ಲೈಫ ಫೆಡರೇಷನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ಒಪ್ಪಂದದ ಸಹಯೋಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಗುಣಮಟ್ಟದ ಶಿಕ್ಷಣ ಮತ್ತು ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಅನುಕೂಲಕರ ಕೋರ್ಸ್‌ಗಳನ್ನು ಅಳವಡಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಉದ್ಯೋಗ ಸಾಮರ್ಥ್ಯ ಹೆಚ್ಚಿಸುವುದು, ಕೈಗಾರಿಕಾ ಕ್ಷೇತ್ರದಲ್ಲಿನ ಅನುಭವವನ್ನು ಹೆಚ್ಚಿಸಲು ಆಸ್ಟ್ರೇಲಿಯಾ ಫೆಡರೇಷನ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಮಕ್ಕಳ ಕಲಿಕಾ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಆಸ್ಟ್ರೇಲಿಯಾ ಫೆಡರೇಷನ್ ವಿಶ್ವವಿದ್ಯಾಲಯದ ಉಪ ಕುಲಪತಿ ಡಂಕನ್ ಬೆಂಟ್ಲೆ ಅವರು ಮಾತನಾಡಿ, ಜಾಗತಿಕ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಾಧ್ಯಾಪಕರಿಗೆ ತರಬೇತಿ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಶೈಕ್ಷಣಿಕ ಅನುಭವಗಳು ಮತ್ತು ಸಾಂಸ್ಕೃತಿಕ ಅರಿವು ಜ್ಞಾನಾರ್ಜನೆಗೆ ನೆರವಾಗುತ್ತದೆ ಎಂದರು.
ಮಲೆನಾಡು ಇಂಜಿನೀಯರಿಂಗ್ ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಇಲ್ಲಿ ಅಧ್ಯಯನ ಮಾಡಿ ಉಳಿದ ಎರಡು ವರ್ಷಗಳ ಕಾಲ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಬಹುದು. ಅಲ್ಲಿಯ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವ್ಯಾಸಂಗ ಮಾಡಬಹುದು ಎಂದು ತಿಳಿಸಿದರು.
ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿ ಡಾ.ಮನೀಷ್ ಮಲ್ಹೋತ್ರಾ, ಸಹ ಕಾರ್ಯನಿರ್ವಹಣಾಧಿಕಾರಿ ರಾಜದಾಸ್ ಗುಪ್ತ , ಅನಿರುದ್ಧ ಫಾಗ್ಟೆ, ಹೆಚ್.ಅರುಣ್, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ.ದ್ಯಾವೇಗೌಡ, ಕೃಷ್ಣಯ್ಯ, ಸಂಸ್ಥೆಯ ನಿರ್ದೇಶಕರಾದ ಪಾರ್ಶ್ವನಾಥ, ಡಿ.ಬಿ.ಹೇಮಂತ್ ಕುಮಾರ್, ಚೌಡವಳ್ಳಿ ಜಗದೀಶ್, ಎಚ್.ಎಲ್.ಗುರುಮೂರ್ತಿ, ಜಿ.ಟಿ.ಕುಮಾರ್, ಕಾಲೇಜು ನಿರ್ದೇಶಕ ಡಾ.ಎಸ್.ಪ್ರದೀಪ್, ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ ಹಾಗು ಇತರರಿದ್ದರು.