ಮಹದೇಶ್ವರ ಬೆಟ್ಟ/ ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಅಂತರಗಂಗೆ ಗೌರಿ ಅಮ್ಮನ ಮಡುವಿನಲ್ಲಿ ಶನಿವಾರ ರಾತ್ರಿ ಗೌರಮ್ಮನ ಕಳಸ ವಿಸರ್ಜನೆ ಪೂಜಾ ಕೈಕರ್ಯ ಸಾಂಪ್ರದಾಯಿಕವಾಗಿ ನೆರವೇರಿತು.
ಗೌರಿ ಹಬ್ಬದ ಹಿನ್ನಲೆಯಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಗೌರಮ್ಮನ ಕಳಸವನ್ನು ಪ್ರತಿಷ್ಠಾಪಿಸಿಲಾಗಿದ್ದು, ಬೇಡಗಂಪಣ ಗುರುಪರಂಪರೆಯ ಶ್ರೀ ಸಾಲೂರು ಬೃಹನ್ಮಠದ ಪಡಿತರ ಸೇವೆಯಲ್ಲಿ 5 ದಿನಗಳ ಕಾಲ ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಶನಿವಾರ ರಾತ್ರಿ ಉಪವಾಸವಿದ್ದ 9 ಜನ ಬೇಡಗಂಪಣ ಅರ್ಚಕರು ಅರಣ್ಯ ಪ್ರದೇಶದೊಳಗಿರುವ ಹಸುವಿನ ದೊಡ್ಡಿಯಿಂದ ಬಿಂದಿಗೆಯಲ್ಲಿ ಹಾಲನ್ನು ತಂದು ಮಾದಪ್ಪನಿಗೆ ಹಾಗೂ ಸ್ವರ್ಣಗೌರಿಗೆ ಏಕಕಾಲದಲ್ಲಿ ಅಭಿಷೇಕ ನೆರವೇರಿಸಲಾಯಿತು. ಬಳಿಕ ಗೌರಮ್ಮನಿಗೆ ಸಂಕಲ್ಪ ಪೂಜೆ, ಗಣಪತಿ ಪೂಜೆ, ರುದ್ರ ಕಳಸ ಪೂಜೆ ಜತೆಗೆ ಏಕವಾರು ರುದ್ರಾಭಿಷೇಕ, ಶಿವ ಅಷ್ಟೋತ್ತರ ಬಿಲ್ವಾರ್ಚನೆ ಹಾಗೂ ಮಹಾನೈವೇದ್ಯವನ್ನು ಅರ್ಪಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು.
ಗೌರಮ್ಮನ ಕಳಸವನ್ನು ಹೊತ್ತ ಬೇಡಗಂಪಣ ಅರ್ಚಕರು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಸತ್ತಿಗೆ, ಸೂರಪಾನಿ ಹಾಗೂ ವಾದ್ಯಮೇಳದಂದಿಗೆ ಮೆರವಣಿಗೆ ಮೂಲಕ ಅಂತರಗಂಗೆಯ ಗೌರಿ ಅಮ್ಮನ ಮಡುವಿಗೆ ತೆರಳಿ ಗಂಗೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಸಿಡಿಮದ್ದು ಸಿಡಿಸಲಾಯಿತು. ಬಳಿಕ ಗೌರಮ್ಮನಿಗೆ ವಿಶೇಷವಾಗಿ ಧೂಪ ದೀಪದ ದೀವಾಟಿಕೆ ಸೇವೆಯ ಜತೆಗೆ ಏಕ ಆರತಿ, ಕಳಸ ಆರತಿ, ತ್ರೀ ಆರತಿ, ಪಂಚ ಆರತಿ, ನಕ್ಷತ್ರ ಆರತಿ ಹಾಗೂ ರಥ ಆರತಿಯನ್ನು ಎತ್ತಲಾಯಿತು. ಗೌರಿಗೆ ನೈವೇದ್ಯ ಹಾಗೂ ಮಹಾಮಂಗಳಾರತಿ ಬೆಳಗಿಸಿ ವಿಸರ್ಜನಾ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಇಲ್ಲಿಂದ ನಿರ್ಗಮಿಸಿದ ಬೇಡಗಂಪಣ ಅರ್ಚಕರು ದೇಗುಲಕ್ಕೆ ತೆರಳಿ ಮಾದಪ್ಪನಿಗೆ ತ್ರಿಕಾಲ ಪೂಜೆಯನ್ನು ಸಲ್ಲಿಸಿ ಹುಲಿ, ಬಸವ ವಾಹನವನ್ನು ನಂದಿಕಂಬದ ಕುಣಿತದೊಂದಿಗೆ ದೇಗುಲದ ಸುತ್ತಾ ಪ್ರದಕ್ಷಿಣೆ ಹಾಕಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ತಮಿಳುನಾಡಿನ ಬರಗೂರು ದ್ರೋಣಮಠದ ಶ್ರೀ ಅಶೋಕ ರಾಜೇಂದ್ರ ಸ್ವಾಮೀಜಿ, ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷಕ ಪ್ರವೀಣ್ ಪಟೇಲ್, ಬೇಡಗಂಪಣ ಸರದಿ ಅರ್ಚಕರಾದ ಕೆ.ವಿ ಮಾದೇಶ್, ಚೇಳಪ್ಪ ತಂಬಡಿ, ಪ್ರಧಾನ ಆಗಮಿಕ ಕರವೀರಸ್ವಾಮೀಜಿ, ಪಾರು ಪತ್ತೇದಾರರಾದ ಮಲ್ಲಿಕಾರ್ಜುನ್, ಪುಟ್ಟಯ್ಯ ಹಾಗೂ ಮ.ಬೆಟ್ಟ ತಪ್ಪಲಿನ ಬೇಡಗಂಪಣ ಜನರು ಭಾಗವಹಿಸಿದ್ದರು.