ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರ ಬೆಟ್ಟದ ಅಂತರಗಂತೆ, ಕಲ್ಯಾಣಿಗಳು ಆಗಾಗ್ಗೆ ಕಲುಷಿತಗೊಳ್ಳುತ್ತಿವೆ.
ಕೆಲವು ತಿಂಗಳ ಹಿಂದೆ ಅಂತರಂಗೆ ಕೊಳಕುಗೊಂಡು ಮೀನುಗಳು ಸತ್ತಿದ್ದವು. ಎರಡು ದಿನಗಳ ಹಿಂದೆ ಕಲ್ಯಾಣಿಯಲ್ಲೂ ಮೀನುಗಳ ಮಾರಣ ಹೋಮವಾಗಿತ್ತು. ನೀರು ಕಲುಷಿತಗೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತರು ಅಂತರಗಂಗೆ, ಕಲ್ಯಾಣಿ ಬಳಕೆ ಮಾಡಿರುವುದು ಮತ್ತು ಕಲುಷಿತಗೊಂಡಿದ್ದರೂ ಬಳಕೆ ಮಾಡುವುದೇ ಕಾರಣ. ಸಕಾಲಕ್ಕೆ ಕಲ್ಯಾಣಿಯನ್ನು ಸ್ವಚ್ಛಗೊಳಸಬೇಕಾಗಿರುವುದು ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯ. ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಬಂದಾಗ ತ್ಯಾಜ್ಯದ ಉತ್ಪಾನೆ ಹೆಚ್ಚಾಗುತ್ತದೆ. ಸ್ನಾನಘಟ್ಟ, ಅಂತರಗಂಗೆ, ಕಲ್ಯಾಣಿ ಕಲುಷಿತಗೊಳ್ಳುತ್ತದೆ. ಈ ಹಿನ್ನೆಯಲ್ಲಿ ಪ್ರಾಧಿಕಾರಕ್ಕೆ ಭಕ್ತರು ಸಹಕಾರ ನೀಡಬೇಕಿದೆ. ಅಲ್ಲದೇ, ಅಂತರಗಂಗೆಗೆ ಕೊಳಚೆ ನೀರು ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶುದ್ಧ ನೀರಿನ ಮೂಲವನ್ನು ಅಂತರಗಂಗೆ ಸೇರಬೇಕಿದೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
*ಕೊಳಗಳ ಪಾವಿತ್ರ್ಯತೆ ಕಾಪಾಡಿ
ಧಾರ್ಮಿಕ ಕ್ಷೇತ್ರಗಳಲ್ಲಿರುವ ಕೊಳಗಳು ತನ್ನದೇಯಾದ ಇತಿಹಾಸವನ್ನು ಹೊಂದಿದ್ದು, ಪವಿತ್ರ ಸ್ನಾನಘಟ್ಟಗಳಾಗಿದೆ. ಮ.ಬೆಟ್ಟದಲ್ಲಿನ ಚಿಕ್ಕಕೊಳವು ಭಕ್ತರ ಪಾಲಿಗೆ ಪವಿತ್ರ ಸ್ಥಳ. ಆದರೆ ಅನೈರ್ಮಲ್ಯದಿಂದಾಗಿ ಮೀನುಗಳು ಮೃತಪಟ್ಟಿರುವುದು ನಿಜಕ್ಕೂ ಬೇಸರದ ಸಂಗತಿ. ಇದರಿಂದ ಶ್ರೀಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮ.ಬೆಟ್ಟದಲ್ಲಿರುವ ಅಂತರಗಂಗೆ ಹಾಗೂ ಇನ್ನಿತರೆ ಕೊಳಗಳಲ್ಲಿ ಆಗ್ಗಾಗ್ಗೆ ಸ್ವಚ್ಛತೆ ಕೈಗೊಳ್ಳುವುದರ ಮೂಲಕ ಪಾವಿತ್ರ್ಯತೆ ಕಾಪಾಡಬೇಕು.
ಕುಮಾರ್ ನಂಜನಗೂಡು, ಮೈಸೂರು
*ಸ್ವಚ್ಛತೆ ಕಾಪಾಡಿ
ಮಹದೇಶ್ವರ ಬೆಟ್ಟದ ಕೊಳದಲ್ಲಿ ಅಪಾರ ಸಂಖ್ಯೆಯಲ್ಲಿ ಸಣ್ಣ ಮೀನುಗಳು ಮೃತಪಟ್ಟಿರುವುದನ್ನು ತಿಳಿದು ಬೇಸರವಾಯಿತು. ಕೊಳದ ಬಗ್ಗೆ ಭಕ್ತರು ಧಾರ್ಮಿಕ ಭಾವನೆಯನ್ನು ಹೊಂದಿದ್ದಾರೆ. ಪುಣ್ಯಸ್ನಾನ ಮಾಡಿದರೆ ಭಕ್ತಿ ಫಲಿಸುತ್ತದೆ ಎಂದು ನಂಬಿಸಿದ್ದಾರೆ. ಆದರೆ ಅಶುಚಿತ್ವದಿಂದ ಸಣ್ಣ ಮೀನುಗಳು ಮೃತಪಟ್ಟಿರುವುದು ನಿಜಕ್ಕೂ ವಿಪರ್ಯಾಸ. ಆದ್ದರಿಂದ ಅಧಿಕಾರಿಗಳು ಸದಾ ಕಾಲ ಸ್ವಚ್ಛತೆ ಕಾಪಾಡುವಲ್ಲಿ ಕಾಳಜಿ ವಹಿಸಬೇಕು. ಸ್ವಚ್ಛಂದ ಪರಿಸರವನ್ನು ನಿರ್ಮಿಸುವುದರತ್ತ ಗಮನಹರಿಸಬೇಕು.
ನಾಗೇಂದ್ರ, ಕಣ್ಣೂರು, ಹನೂರು
*ಕೊಳಗಳಿಗೆ ಮಲಿನ ನೀರು ಸೇರದಂತೆ ಕ್ರಮವಹಿಸಿ
ಮ.ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಜೀವ ಸಂಕುಲ ನಾಶವಾಗಬಾರದು. ಆದರೆ ಆಚಾತುರ್ಯವಾಗಿ ಕೊಳದಲ್ಲಿ ಮೀನುಗಳು ಮೃತಪಟ್ಟಿವೆ. ಸ್ವಚ್ಛತೆ ಸಂಬಂಧ ಪ್ರಾಧಿಕಾರ ಮುತುರ್ವಜಿ ವಹಿಸಿದ್ದು, ಇನ್ನಷ್ಟು ಹೆಚ್ಚಾಗಬೇಕು. ಕೊಳಗಳಿಗೆ ಮಲೀನ ಸೇರದಂತೆ ಕ್ರಮವಾಗಬೇಕು. ಅಂತರಗಂಗೆ ಮೇಲ್ದರ್ಜೆಗೇರಬೇಕು. ಶ್ರೀಕ್ಷೇತ್ರದಲ್ಲಿ ಅಭಿವೃದ್ಧಿಯ ಜತೆಗೆ ಪ್ರಕೃತಿ ಉಳಿಸುವಂತಹ ಕೆಲಸವಾಗಬೇಕು.
ಕೆ.ವಿ ಮಾದೇಶ್, ಬೇಡಗಂಪಣ ಅರ್ಚಕ, ಮ.ಬೆಟ್ಟ
*ಕೊಳವನ್ನು ಸ್ವಚ್ಛಗೊಳಿಸಲಾಗಿದೆ
ಮಹದೇಶ್ವರ ಬೆಟ್ಟದಲ್ಲಿ ಮಳೆಯಾದ ಹಿನ್ನೆಲೆ ಕೊಳಚೆ ನೀರು ಕೊಳದಲ್ಲಿ ಬೆರೆತಿದೆ. ಹಾಗಾಗಿ ಸಣ್ಣ ಮೀನುಗಳು ಮೃತಪಟ್ಟಿತ್ತು. ಈ ಬಗ್ಗೆ ತಿಳಿದು ಕೂಡಲೇ ಸಿಬ್ಬಂದಿಯಿಂದ ಕೊಳವನ್ನು ಸ್ವಚ್ಛಗೊಳಿಸಲಾಗಿದ್ದು, ನೈರ್ಮಲ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಈ ಬಗ್ಗೆ ಸಿಬ್ಬಂದಿಗೆ ಸೂಚಿಸಲಾಗಿದೆ.
ಎ.ಈ ರಘು, ಕಾರ್ಯದರ್ಶಿ, ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ
*ಅಂತರಗಂಗೆ ಶುದ್ಧವಾಗಲಿ
ಮಹದೇಶ್ವರ ಬೆಟ್ಟದ ಅಂತರಗಂಗೆ ಭಕ್ತರ ಪಾಲಿಗೆ ಪವಿತ್ರ ಕೊಳ. ಇಲ್ಲಿ ಹರಿಯುವ ನೀರನಲ್ಲಿ ಪವಿತ್ರವೆಂದು ಭಾವಿಸಿ ಸ್ನಾತ ಮಾಡುವುದಷ್ಟೇ ಅಲ್ಲದೇ, ತೀರ್ಥದ ರೂಪದಲ್ಲಿ ಕಾಣುತ್ತೇವೆ. ಆದರೆ ಅಂತರಗಂಗೆ ಕೊಳ ಕಲುಷಿತಗೊಂಡಿದೆ. ತ್ಯಾಜ್ಯದ ರಾಶಿಯ ನಡುವೆ ಕೊಳಚೆ ನೀರು ಸೇರಿಕೊಳ್ಳುತ್ತಿದೆ. ಇದನ್ನು ಲೆಕ್ಕಿಸದ ಕೆಲವು ಭಕ್ತರು ಅಂತರಗಂಗೆಯಲ್ಲೇ ಸ್ನಾನ ಮಾಡುತ್ತಿದ್ದಾರೆ. ಪವಿತ್ರ ಕೊಳದ ಮೇಲಿನ ನಂಬಿಕೆ ಭಕ್ತರಿಗೆ ಕಡಿಮೆಯಾಗುವುದಿಲ್ಲ. ಹಾಗೆಂದು ಕಲುಷಿತ ನೀರಿನಲ್ಲಿ ಭಕ್ತರು ಸ್ನಾನ ಮಾಡಬಾರದು. ಈ ಹಿನ್ನೆಲೆಯಲ್ಲಿ ಕೊಳಚೆ ನೀರು ಸೇರುತ್ತಿರುವುದನ್ನು ತಡೆಗಟ್ಟಬೇಕು. ಅಂತರಗಂಗೆಯನ್ನು ಶುಚಿಗೊಳಿಸುತ್ತಲೇ ಇರಬೇಕು.
ಲಿಂಗರಾಜು, ಚಾಲಕ, ಬನ್ನಿಸಾರಿಗೆ, ಯಳಂದೂರು
*ಭಕ್ತರೂ ಸಹಕಾರವೂ ಅಗತ್ಯ
ಶ್ರೀಮಹದೇಶ್ವರ ಬೆಟ್ಟ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿರುವ ಅಂತರಗಂಗೆ ಆಗಾಗ ಕಲುಷಿತ ಗೊಳ್ಳುತ್ತಲೇ ಇರುತ್ತದೆ. ಕೊಳಚೆ ನೀರು ಸೇರಿ ನೀರು ದುರ್ವಾಸನೆ ಬೀರುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮುಗ್ಧ ಭಕ್ತರು ಇಲ್ಲಿಯೇ ಸ್ನಾನ ಮಾಡುತ್ತಾರೆ. ಪ್ರಾಧಿಕಾರ ಅಂತರಗಂಗೆಯನ್ನು ಸ್ವಚ್ಚತೆಯಿಂದ ಇಡುವಲ್ಲಿ ವಿಫಲವಾಗಿದೆ. ದೇವಾಲಯ ಪ್ರಾಮುಖ್ಯತೆ ಹೆಚ್ಚಿಸಬೇಕೆಂದರೆ ಭಕ್ತರಿಗೆ ಶುಚಿತ್ವ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ. ಭಕ್ತರೂ ಸಹ ಪವಿತ್ರ ಸ್ಥಳಗಳು ಕಲುಷಿತ ಆಗದಂತೆ ಸಹಕರಿಸಬೇಕು.
ಸವಿತಾ ಲೋಕೇಶ್, ಕಾಯದರ್ಶಿ , ಅಕ್ಕನ ಬಳಗ, ಕೊಳ್ಳೇಗಾಲ
*ಶಾಂಪು, ಸೋಪಿನ ಪ್ಯಾಕೆಟ್
ಧಾರ್ಮಿಕ ಕೇಂದ್ರಗಳಲ್ಲಿರುವ ಕೊಳಗಳಲ್ಲಿ ಶ್ಯಾಂಪು ಮತ್ತು ಸೋಪು ಬಳಕೆ ಮಾಡುವುದನ್ನು ರಾಜ್ಯ ಸರ್ಕಾರ ನಿಷೇಧ ಮಾಡಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಇಲ್ಲದಿದ್ದರೆ ನೀರಿನಲ್ಲಿರುವ ಜಲಚರಗಳಿಗೆ ತೊಂದರೆಯಾಗುತ್ತದೆ. ಶಾಂಪು, ಸೋಪು ಬಳಕೆ ಮಾಡಿದ ಬಳಿಕ ನೀರಿನಲ್ಲಿ ಎಸೆದು ಹೋಗುತ್ತಿರುವುದರಿಂದ ಕೊಳ ಕಲುಷಿತಗೊಳ್ಳುತ್ತಿದೆ. ಇದನ್ನು ತಪ್ಪಿಸಿದರೆ ಸ್ವಚ್ಛತೆಗೆ ಮೊದಲ ಹೆಜ್ಜೆ ಇಟ್ಟಂತಾಗುತ್ತದೆ.
ರವೀಶ್, ಗೆಜ್ಜಲಗೆರೆ ಮಂಡ್ಯ
*ಪ್ಲಾಸ್ಟಿಕ್ ನಿಷೇಧಿಸಿ, ಸ್ವಚ್ಛತೆ ಕಾಪಾಡಿ
ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ತಪ್ಪಿಸಬೇಕು. ಇದರಿಂದ ತ್ಯಾಜ್ಯ ಉತ್ಪಾನೆಯನ್ನು ತಡೆಯಬಹುದು. ಪರಿಸರಕ್ಕೆ ಪ್ಲಾಸ್ಟಿಕ್ ಮಾರಕವಾಗಿದ್ದು, ವನ್ಯಜೀವಿಗಳಿಗೂ ತೊಂದರೆಯಾಗಲಿದೆ. ಪ್ಲಾಸ್ಟಿಕ್ ನಿಷೇಧಿತ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ನಿಯಮ ಜಾರಿ ಮಾಡಬೇಕು. ಭಕ್ತರೂ ಸಹ ಇದಕ್ಕೆ ಸಹಕಾರ ನೀಡಬೇಕು. ಕುಡಿಯುವ ನೀರಿನ ಬಾಟಲ್‌ಗಳನ್ನು ತರುವುದನ್ನು ನಿಲ್ಲಿಸಬೇಕು. ಅಂತರಗಂಗೆ, ಕಲ್ಯಾಣಿಗಳಲ್ಲಿ ಶ್ರೀಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಸಿಬ್ಬಂದಿ ನಿಯೋಜಿಸಿ ಭಕ್ತರನ್ನು ಮೇಲ್ವಿಚಾರಣೆ ಮಾಡಬೇಕು.
ಮಣಿಕಂಠ, ಗ್ರಾ.ಪಂ ಸದಸ್ಯ, ಹೊಂಗನೂರು, ಚಾಮರಾಜನಗರ