ಅಂಕೋಲಾ: ತಾಲೂಕಿನಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಜನರಲ್ಲಿ ಇನ್ನೂ ಜಾಗೃತಿ ಮೂಡಿಲ್ಲ ಎನ್ನುವುದಕ್ಕೆ ಪಟ್ಟಣದಲ್ಲಿ ಶನಿವಾರ ನಡೆದ ಸಂತೆಯಲ್ಲಿ ಕಂಡುಬಂದ ಜನದಟ್ಟಣೆಯೇ ಸಾಕ್ಷಿಯಾಗಿದೆ.
ತಾಲೂಕಿನಲ್ಲಿ ಶನಿವಾರ 7 ಕರೊನಾ ಸೋಂಕಿತರು ಪತ್ತೆಯಾಗಿದ್ದು, ನಿತ್ಯ ಎರಡ್ಮೂರು ಪ್ರಕರಣ ಪತ್ತೆಯಾಗುತ್ತಲೇ ಇವೆ. ಕೆಲವರು ತೀರಾ ನಿಗಾ ವಹಿಸಿ ಅನಗತ್ಯವಾಗಿ ಎಲ್ಲಿಯೂ ಓಡಾಡದೆ ತಮ್ಮ ಮನೆಯಲ್ಲಿಯೇ ಕಾಲ ಕಳೆದರೆ, ಇನ್ನು ಕೆಲವರು ಕರೊನಾಗೂ ನಮಗೂ ಏನೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದು ಎಲ್ಲರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳವಂತೆ ಎಷ್ಟೇ ತಿಳಿಸಿ ಹೇಳಿದರೂ ಜನರು ಮುಗಿ ಬಿದ್ದು ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ. ಇದರಿಂದ ಇತರರಿಗೆ ಸೋಂಕು ಹರಡುವ ಭೀತಿ ಎದುರಾಗುತ್ತಿದೆ. ಇನ್ನಾದರೂ ಇಂತಹ ಜನದಟ್ಟಣೆಗೆ ಕಡಿವಾಣ ಹಾಕುವ ಅಗತ್ಯವಿದೆ.
ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ಕರೊನಾ ಹಾವಳಿಯ ಕುರಿತು ವರದಿಗಳು ಬಿತ್ತರವಾಗುತ್ತಿವೆ. ಆದರೂ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರಿಂದ ಅವರೇ ಸಮಸ್ಯೆಗೆ ಸಿಲುಕುತ್ತಾರೆ. ನಮ್ಮ ಇಲಾಖೆಯಿಂದು ಏನು ಮಾಡಬೇಕೋ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ. ಜನರೂ ಇದನ್ನು ಅರ್ಥ ಮಾಡಿಕೊಳ್ಳಬೇಕು.| ಉದಯ ಕುಂಬಾರ ತಹಸೀಲ್ದಾರ್ ಅಂಕೋಲಾಪಟ್ಟಣದಲ್ಲಿ ಗುಂಪುಗೂಡದಂತೆ ಸಾಕಷ್ಟು ಎಚ್ಚರಿಕೆ ನೀಡಲಾಗಿದೆ. ಕರೊನಾ ಹಾವಳಿಯ ಕುರಿತು ಧ್ವನಿವರ್ಧಕದ ಮೂಲಕವೂ ಪಟ್ಟಣ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗಿದೆ. ಆದರೆ, ಜನರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗೇಯೆ ಮುಂದುವರಿದರೆ ನಮ್ಮಲ್ಲಿ ಮುಂದೊಂದು ದಿನ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.| ಬಿ. ಪ್ರಹ್ಲಾದ ಪುರಸಭೆ ಮುಖ್ಯಾಧಿಕಾರಿ ಅಂಕೋಲಾ