ಜಿಲ್ಲೆ

ಅಂಡರ್‌ಪಾಸ್ ನಿರ್ಮಿರ್ಮಾಣಕ್ಕೆ ಕ್ರಮ ಕೈಗೊಳ್ಳಿ

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಿಸಲು ಅಗತ್ಯ ಕ್ರಮಗಳನ್ನು ಶೀಘ್ರ ನಡೆಸಬೇಕು ಎಂದು ಸಂಸದ ಸುನೀಲ್ ಬೋಸ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ನಿರ್ಮಾಣವಾದ ಬಳಿಕ ಸತ್ತೇಗಾಲ ಬೈಪಾಸ್ ರಸ್ತೆಯಲ್ಲಿ ಅಪಘಾತಗಳು, ಸಾವು-ನೋವುಗಳು ಸಂಭವಿಸಿದ್ದ ಹಿನ್ನೆಲೆ ಗುರುವಾರ ಖುದ್ದು ಸಂಸದ ಸುನೀಲ್ ಬೋಸ್ ಬೈಪಾಸ್ ರಸ್ತೆ ಪರಿಶೀಲಿಸಿ ಮಾತನಾಡಿದರು.

ಇದಕ್ಕೂ ಮುನ್ನ ಸತ್ತೇಗಾಲ ಗ್ರಾಮದ ಮುಖಂಡ ರಾಜಶೇಖರ್ ಮಾತನಾಡಿ, ಬೈಪಾಸ್ ರಸ್ತೆಯಾದ ಬಳಿಕ ನಿರಂತರ ಅಪಘಾತಗಳು ನಡೆಯುತ್ತಿದೆ. ಕಳೆದ 2 ತಿಂಗಳಲ್ಲಿ ಸತ್ತೇಗಾಲ ಗ್ರಾಮದ ಪರಿಮಿತಿಯಲ್ಲಿ 6 ಜನರು ಅಫಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಕೈ ಕಾಲು ಮುರಿದುಕೊಂಡಿದ್ದಾರೆ. ಈ ಅವೈಜ್ಞ್ಞಾನಿಕ ಬೈಪಾಸ್ ರಸ್ತೆ ವಿರುದ್ಧ ಹಿಂದೆ ಗ್ರಾಮಸ್ಥರು ರಸ್ತೆ ಪ್ರತಿಭಟಿಸಲು ನಿರ್ಧರಿಸಿದ್ದೆವು. ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಬಿ.ಟಿ ಕವಿತಾ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಅಂಡರ್ ಪಾಸ್ ನಿರ್ಮಾಣ ಮತ್ತು ಅಪಘಾತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದ್ದರು. ಬಳಿಕ ಹೆದ್ದಾರಿ ಅವರು ಕೆಲವು ಕಡೆ ರಸ್ತೆ ಹುಬ್ಬುಗಳನ್ನು ಹಾಕಿದ್ದಾರೆ ಅದು ಸಹ ಕಳಪೆಯಾಗಿದೆ. ಜಂಕ್ಷನ್‌ನಲ್ಲಿ ಲೈಟ್‌ಗಳನ್ನು ಅಳವಡಿಸಿದ್ದಾರೆ ಆದರೆ ಉರಿಯುತ್ತಿಲ್ಲ. ಜನರು ಜೀವ ಭಯದಲ್ಲಿ ಸಂಚಾರ ಮಾಡುತ್ತಿದ್ದಾರೆ.

ಹಾಗಾಗಿ ಸತ್ತೇಗಾಲ ಗ್ರಾಮ ಹಾಗೂ ಹ್ಯಾಂಡ್ ಪೋಸ್ಟ್ ಗ್ರಾಮದ ಬೈಪಾಸ್ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಾಣ ಆಗಬೇಕು. ಅಂತೆಯೇ, ಕೊಳ್ಳೇಗಾಲದಿಂದ ಸತ್ತೇಗಾಲ ಗ್ರಾಮಕ್ಕೆ ಪ್ರವೇಶಿಸಿಸುವ ಸ್ಥಳದಲ್ಲಿ ಅಂಡರ್ ಪಾಸ್ ಆಗಬೇಕೆಂದು ಒತ್ತಾಯಿಸಿದರು. ಆಹವಾಲು ಆಲಿಸಿ ಬಳಿಕ ಸಂಸದ ಸುನೀಲ್ ಬೋಸ್ ಮಾತನಾಡಿ, ಹೆದ್ದಾರಿ ಕಾಮಗಾರಿ ಕಳಪೆ, ಅವೈಜ್ಞಾನಿಕ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಎಂದು ಎನ್.ಎಚ್. ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದು ಕೊಂಡಿದ್ದರಲ್ಲದೆ, ಅಂಡರ್ ಪಾಸ್ ನಿರ್ಮಾಣಕ್ಕೆ ಏನು ಕ್ರಮವಹಿಸಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಎನ್‌ಎಚ್‌ಐ ಇಂಜಿನಿಯರ್ ವಿಶ್ವ ಪ್ರತಿಕ್ರಿಯಿಸಿ ಸತ್ತೇಗಾಲ ಮತ್ತು ಹ್ಯಾಂಡ್ ಪೋಸ್ಟ್ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರೀಯಾಯೋಜನೆ ಸಲ್ಲಿಸಲಾಗಿದೆ ಎಂದರು.

ನಂತರ ಸಂಸದ ಸುನೀಲ್ ಬೋಸ್ ಮಾತನಾಡಿ, ಅಂಡರ್‌ಪಾಸ್ ಯೋಜನೆ ಪ್ರಕ್ರಿಯೆ ಜರೂರಾಗಿ ಆಗಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಡಿಸಿ, ಎಸ್ಪಿ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇದೀಗ ನಾನೇ ಖುದ್ದು ಭೇಟಿ ನೀಡಿದ್ದೇನೆ ಫಾಲೋಅಪ್ ಮಾಡುತ್ತೇನೆ ಅಂಡರ್ ಪಾಸ್ ಮಾಡಬೇಕೆಂದು ಖಡಕ್ ಸೂಚನೆ ನೀಡಿದರು.

ಟೋಲ್ ಶುಲ್ಕ ಕಟ್ಟಿಸಕೊಳ್ಳದಂತೆ ಸಂಸದ ಸೂಚನೆ: ನೂತನವಾಗಿ ಮಳವಳ್ಳಿ ತಾಲೂಕು ವ್ಯಾಪ್ತಿಯ ಜವನಗಳ್ಳಿ ಸಮೀಪ ಟೋಲ್ ನಿರ್ಮಾಣವಾಗಿದೆ. ಟೋಲ್‌ನಿಂದ 20 ಕಿ.ಮೀ ವ್ಯಾಪ್ತಿಯಲ್ಲಿರುವ ಸ್ಥಳೀಯರಿಗೆ ಶುಲ್ಕದ ವಿನಾಯಿತಿ ಇರುತ್ತದೆ. ಆದರೆ ಸತ್ತೇಗಾಲ ಗ್ರಾಮಕ್ಕೂ ಟೋಲ್‌ಗೂ ಕೇವಲ ನಾಲ್ಕೈದು ಕಿ.ಮೀ ಇದ್ದರು ಟೋಲ್ ಕಟ್ಟಿಸಿಕೊಳ್ಳಲಾಗುತ್ತಿದೆ. ಇದರಿಂದ ನಮಗೆ ಸಮಸ್ಯೆ ಆಗುತ್ತಿದೆ ಎಂದು ಸತ್ತೇಗಾಲ ಗ್ರಾಮದ ಮುಖಂಡರು, ಯುವಕರು, ಡಾ.ಬಿ.ಆರ್.ಅಂಬೇಡ್ಕರ್ ಸತ್ಯಾದ್ರಿ ಯುವಕರ ಸಂಘದ ಪದಾಧಿಕಾರಿಗಳು ಸಂಸದರಿಗೆ ದೂರಿದರು. ಬಳಿಕ ಮಾತನಾಡಿದ ಸಂಸದರು, ಈ ವೇಳೆ ಸ್ಥಳದಲ್ಲಿದ್ದ ಎನ್‌ಎಚ್ ಅಧಿಕಾರಿಗಳಿಗೆ ಇನ್ಮುಂದೆ ಈ ದೂರು ನನಗೆ ಕೇಳುವಂತಿಲ್ಲ. ಸ್ಥಳೀಯರು ದಿನ ನಿತ್ಯ ಸಂಚರಿಸುತ್ತಾರೆ. ಅವರೆಲ್ಲಿ ನಿಮಗೆ ಹಣ ಕಟ್ಟುತ್ತಾರೆ. ಹಣ ಕಟ್ಟಿಸಿಕೊಳ್ಳದ ರೀತಿಯಲ್ಲಿ ಕ್ರಮ ಆಗಬೇಕೆಂದರು.

ಹೊಸ ಸೇತುವೆ ಕಳಪೆ: ಸತ್ತೇಗಾಲ ಸಮೀಪದ ಬೈಪಾಸ್ ನೂತನ ಸೇತುವೆ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ದೂರು ಕೇಳಿ ಬರುತ್ತಿದೆ. ಸೇತುವೆ ಮೇಲಿನ ಸಿಮೆಂಟ್ ಕಾಂಕ್ರಿಟ್ ಕಿತ್ತು ಬರುತ್ತಿದೆ. ಅಲ್ಲದೆ, ವಾಹನ ಸಂಚಾರ ವೇಳೆ ಸೇತುವೆ ಹೆಚ್ಚು ಅಲುಗಾಡುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ ಏಕೆ ಎಂದು ಎನ್‌ಎಚ್ ಅಧಿಕಾರಿಗಳನ್ನು ಸಂಸದರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಇಂಜಿನಿಯರ್ ವಿಶ್ವ, ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಈ ವೇಳೆ ಮಾಜಿ ಶಾಸಕ ಆರ್.ನರೇಂದ್ರ, ಉಪವಿ ಭಾಗಧಿಕಾರಿ ದಿನೇಶ್ ಕುಮಾರ್ ಮೀನಾ, ಡಿವೈಎಸ್ಪಿ ಎಂ.ಧಮೇಂದ್ರ, ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಇತರರು ಇದ್ದರು.