ಹಿರೀಸಾವೆ: ಸಮೀಪ ಬೂಕನಬೆಟ್ಟದ ಗೇಟ್ ಬಳಿ ಅಂಡರ್ ಪಾಸ್ ಹಾಗೂ ಹೆಗ್ಗಡಿಹಳ್ಳಿ ಗ್ರಾಮದ ಬಳಿ ಸ್ಕೈವಾಕ್ ನಿರ್ಮಾಣ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಹೆಗ್ಗಡಿಹಳ್ಳಿ, ಚಿಕ್ಕೋನಹಳ್ಳಿ, ಬೂಕನಬೆಟ್ಟ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ 75ರ ಚಿಕ್ಕೋನಹಳ್ಳಿ ಗೇಟ್ ಸಮೀಪದ ಶ್ರೀಸಾಯಿಬಾಬಾ ಮಂದಿರದ ಬಳಿ ಸ್ಕೈವಾಕ್ ನಿರ್ಮಾಣ ಮಾಡಲು ಮುಂದಾಗಿದೆ. ಇದರಿಂದ ರಸ್ತೆ ಪಕ್ಕದ ಗ್ರಾಮಗಳ ಜನರಿಗೆ ಯಾವುದೇ ರೀತಿಯಲ್ಲಿ ಅನುಕೂಲ ಆಗುವುದಿಲ್ಲ. ಇದನ್ನು ರದ್ದುಪಡಿಸಬೇಕು. ಮುಜರಾಯಿ ಇಲಾಖೆಗೆ ಸೇರಿದ ಇತಿಹಾಸ ಪ್ರಸಿದ್ಧ ಬೂಕನಬೆಟ್ಟ ರಂಗನಾಥಸ್ವಾಮಿ ದೇವಾಲಯ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಸಂಪರ್ಕ ರಸ್ತೆಗೆ ಅಂಡರ್ ಪಾಸ್ ನಿರ್ಮಾಣ ಮಾಡುವುದರಿಂದ ಭಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಿದರು.
ಪ್ರತಿವರ್ಷ ಜನವರಿಯಲ್ಲಿ ನಡೆಯುವ ಬೃಹತ್ ಜಾನುವಾರು ಜಾತ್ರೆಗೆ ಎತ್ತುಗಳನ್ನು ಎರಡು ಕಿ.ಮೀ. ಸುತ್ತಿ ಕರೆತರಬೇಕಿದೆ. ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವುದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಸುಗಮ ಸಂಚಾರ ಮಾಡುತ್ತಾರೆ ಎಂದು ತಿಳಿಸಿದರು.
ಹೆಗ್ಗಡಿಹಳ್ಳಿ ಮತ್ತು ಬೂಕನಬೆಟ್ಟದ ಗೇಟ್ ಬಳಿ ಆಗಾಗ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಆಗಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಸ್ಥಳವನ್ನು ಅಪಘಾತ ವಲಯ ಎಂದು ಘೋಷಣೆ ಮಾಡಿ ರಸ್ತೆಯ ಎರಡು ಕಡೆ ಫಲಕವನ್ನು ಅಳವಡಿಸಿದ್ದಾರೆ. ಹೆಗ್ಗಡಿಹಳ್ಳಿ ಬಳಿ ಸ್ಕೈವಾಕ್ ನಿರ್ಮಿಸುವುದು ಅಗತ್ಯವಿದೆ ಎಂದು ಒತ್ತಾಯಿಸಿದರು.
ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಕರವೇ ಮಹೇಶ್, ದಲಿತ ಸಂಘಟನೆ ಮುಖಂಡ ಮಂಜುನಾಥ್ ಮಾತನಾಡಿದರು.
ಕಳೆದ ಎರಡು ದಿನದ ಹಿಂದೆ ಸಾಯಿಬಾಬಾ ಮಂದಿರದ ಬಳಿ ಹಿಂದುಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯೂ ಸ್ಕೈವಾಕ್ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲು ಮುಂದಾಗಿತ್ತು. ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಸದ್ಯಕ್ಕೆ ಕೆಲಸ ಸ್ಥಗಿತವಾಗಿದೆ. ಸೋಮವಾರ ಹಿರೀಸಾವೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಮನವಿ ಪತ್ರವನ್ನು ಕಂಪನಿಯ ಅಧಿಕಾರಿಗಳಿಗೆ ಸಲ್ಲಿಸಿದರು.