ಜಿಲ್ಲೆ

ಅಂಚೆ ಕಚೇರಿ ರಫ್ತು ಕೇಂದ್ರ ಉದ್ಘಾಟನೆ

ಕೊಪ್ಪಳ: ಅಂಚೆ ಇಲಾಖೆ ಅಂದರೆ ಕೇವಲ ಪತ್ರ ವ್ಯಹವಾರ ಎಂಬ ಕಾಲವಿತ್ತು. ಇಂದು ಎಲ್ಲ ಬದಲಾಗಿದೆ. ಬ್ಯಾಂಕಿಂಗ್ ಸೇವೆ ಆರಂಭವಾಗಿದ್ದು, ಇದೀಗ ರಫ್ತು ಕೇಂದ್ರವನ್ನು ಆರಂಭಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.


ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಚೆ ಕಚೇರಿ ರಫ್ತು ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಒಬ್ಬ ನಾಯಕನ ಆಲೋಚನೆಯಿಂದ ಎಂಥ ಬದಲಾವಣೆ ಮಾಡಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ. ಅಳಿವಿನ ಅಂಚಿನಲ್ಲಿದ್ದ ಅಂಚೆ ಇಲಾಖೆಯಲ್ಲಿ ಒಂದೊಂದೆ ಸೇವೆ ಆರಂಭಿಸಿ ಹೆಮ್ಮರವಾಗಿ ಬೆಳೆಸಿದ್ದಾರೆ. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಸೇವೆ ಆರಂಭಿಸಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ರಫ್ತು ಕೇಂದ್ರ ಆರಂಭದಿಂದ ಗುಡಿ ಕೈಗಾರಿಕೆಗಳು ಹಾಗೂ ರೈತಾಪಿ ವರ್ಗಕ್ಕೆ ಸಾಕಷ್ಟು ಅನುಕೂಲವಾಗಲಿದೆ. ತೋಟಗಾರಿಕೆ, ರೇಷ್ಮೆ, ಕಿನ್ನಾಳ ಕಲೆ ಸೇರಿ ಇನ್ನಿತರ ಉತ್ಪನ್ನಗಳನ್ನು ಸುಲಭವಾಗಿ ರಾಜ್ಯ, ರಾಷ್ಟ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುಲಭವಾಗಿ ರಫ್ತು ಮಾಡಬಹುದು. ಇದರಿಂದ ರೈತರ ಆದಾಯವೂ ದ್ವಿಗುಣವಾಗಲಿದೆ ಎಂದರು.


ಸರ್ಕಾರ ಯೋಜನೆಗಳನ್ನು ರೂಪಿಸಿದರೂ, ಅವುಗಳನ್ನು ಸರಿಯಾಗಿ ಅನುಷ್ಠಾನ ಮಾಡಿ ಜನರಿಗೆ ತಲುಪಿಸುವ ಕರ್ತವ್ಯ ಅಧಿಕಾರಿಗಳ ಮೇಲಿದೆ. ಅವರು ಜನಪರ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಜನರಿಗೆ ತಲುಪಿಸಿದಾಗ ಯೋಜನೆ ಯಶಸ್ವಿಯಾಗಲಿದೆ. ಅಂಚೆ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಭ್ರಷ್ಟಾಚಾರ ಮುಕ್ತ ಇಲಾಖೆ ಎಂದರೆ ಅಂಚೆ ಇಲಾಖೆ ಎನ್ನಬಹುದು. ಜಿಲ್ಲೆಯಲ್ಲಿ ವಿಭಾಗೀಯ ಅಂಚೆ ಕಚೇರಿ ಆರಂಭಿಸಬೇಕೆಂಬ ಬೇಡಿಕೆ ಇದೆ. ಅದಕ್ಕೂ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.


ಪ್ರಗತಿಪರ ರೈತ ದೇವೇಂದ್ರಗೌಡ ಬಳೂಟಗಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದರೆ, ಮಾರುಕಟ್ಟೆ ಕೊರತೆ ಇದೆ. ವೈಜ್ಞಾನಿಕ ತಂತ್ರಗಳನ್ನು ಅಳವಡಿಸಿಕೊಂಡು ಬೆಳೆ ಬೆಳೆಯಬೇಕು. ಅದಕ್ಕೆ ಸೂಕ್ತ ಮಾರುಕಟ್ಟೆ ಹುಡುಕಿಕೊಳ್ಳಬೇಕು. ಇದಕ್ಕೆ ಅಧಿಕಾರಿಗಳ ಸಹಕಾರವೂ ಅಗತ್ಯ ಎಂದರು.


ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ ಮಾತನಾಡಿ, ಸದ್ಯ ಒಕ್ಕಲುತನದ ಬಗ್ಗೆ ನಾವು ನಿರ್ಲಕ್ಷೃವಹಿಸುತ್ತಿದ್ದೇವೆ. ಇದು ಅಪಾಯಕಾರಿ. ವಿದ್ಯಾವಂತರು ಕೃಷಿಗೆ ಬರಬೇಕು. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಅದನ್ನು ಖರೀದಿಸುವ ಗುಣ ಗ್ರಾಹಕರಲ್ಲಿ ಬರಬೇಕು. ಇಬ್ಬರಲ್ಲಿ ಬದಲಾವಣೆಯಾದಾಗ ಉತ್ತಮ ಆಹಾರ ಸಿಗಲಿದೆ ಎಂದರು.


ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿದರು. ಗದಗ ವಿಭಾಗ ಅಂಚೆ ಅಧೀಕ್ಷಕ ಎನ್.ಜಿ. ಭಂಗಿಗೌಡ, ಹೆಡ್ ಪೋಸ್ಟ್ ಮಾಸ್ಟರ್ ಎ.ಭೀಮಸೇನ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್, ನಗರಸಭೆ ಸದಸ್ಯ ರಾಜಶೇಖರ್ ಆಡೂರು, ಪ್ರಮುಖರಾದ ಆರ್.ಬಿ.ಪಾನಘಂಟಿ, ರಾಜು ಬಾಕಳೆ, ಮಂಜುಳಾ ಕರಡಿ ಇತರರಿದ್ದರು.