ಜಿಲ್ಲೆ

ಅಂಚೆ ಇಲಾಖೆಯಿಂದ ಒಂದೇ ಸೂರಿನಡಿ ಸರ್ಕಾರಿ ಸೇವೆಗಳು

ಹನಗೋಡು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೇವೆಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಕರ್ನಾಟಕ ಅಂಚೆ ಇಲಾಖೆ ಕಾರ್ಯಪ್ರವೃತವಾಗಿದೆ ಎಂದು ಹುಣಸೂರು ಅಂಚೆ ವಿಭಾಗೀಯ ಇನ್ಸ್‌ಪೆಕ್ಟರ್ ಕುಮಾರ್ ಅಭಿಜಿತ್ ತಿಳಿಸಿದರು.

ಹನಗೋಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅಂಚೆ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಅಂಚೆ ಜನ ಸಂಪರ್ಕ ಅಭಿಯಾನದಲ್ಲಿ ಮಾತನಾಡಿ, ಅಭಿಯಾನದಲ್ಲಿ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳು ಮತ್ತು ಅಂಚೆ ಜೀವ ವಿಮಾ ಸೌಲಭ್ಯಗಳು, ಅಪಘಾತ ವಿಮಾ ಯೋಜನೆಗಳ ಮಾಹಿತಿಗಳನ್ನು ತಿಳಿಸಿ, ಈಗ ಎಲ್ಲೆಡೆ ಜನರು ಅಂಚೆ ಕಚೇರಿಯಲ್ಲಿ ಉಳಿತಾಯ ಯೋಜನೆಗಳಾದ ಉಳಿತಾಯ ಖಾತೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ, ಸಾರ್ವಜನಿಕ ಭವಿಷ್ಯ ನಿಧಿ, ಅಂಚೆ ಜೀವ ವಿಮಾ ಸೇವೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹುಣಸೂರು ಕೇಂದ್ರ ಕಚೇರಿಯ ಅಧೀಕ್ಷ ಕಿರಣ್, ಕಾಲೇಜಿನ ಪ್ರಾಂಶುಪಾಲ ದೊರೆರಾಜ್, ಪ್ರೌಢಾಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್, ಅಂಚೆ ಇಲಾಖೆಯ ನಂದೀಶ್, ಶಿವಕುಮಾರ್, ತನುಜಾ ಇತರರು ಇದ್ದರು.