ಮೈಸೂರು: ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಆರೋಪಿಸಿದರು
ನಗರದಲ್ಲಿ ಆಯೋಜಿಸಿದ್ದ ನ್ಯಾಷಿನಲ್ ಫೆಡರೇಷನ್ ಆಫ್ ಪೋಸ್ಟಲ್ ಎಂಪ್ಲಾಯಿಸ್‌ನ 12ನೇ ಫೆಡರಲ್ ಕೌನ್ಸಿಲ್ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಅಂಚೆ ಇಲಾಖೆಯು ಭಾರತೀಯರ ಆಸ್ತಿ. ಈ ಖಾಸಗೀಕರಣದ ಹುನ್ನಾರಗಳನ್ನು ವಿರೋಧಿಸುವ ಮೂಲಕ ಸಾರ್ವಜನಿಕರ ಸ್ವತ್ತಾದ ಅಂಚೆ ಇಲಾಖೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಅಂಚೆ ನೌಕರನ ಮೇಲಿದೆ. ಈ ನಿಟ್ಟಿನಲ್ಲಿ ಅಗತ್ಯ ಹೊರಾಟ ನಡೆಸಬೇಕು ಎಂದರು.
ಅಂಚೆ ಇಲಾಖೆಯನ್ನು ಆರು ಘಟಕಗಳನ್ನಾಗಿ ವಿಭಜಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಇದೊಂದು ಅವೈಜ್ಞಾನಿಕ ಕ್ರಮಾಗಿದೆ. ಒಂದೆಡೆ ಲಾಭ ಮತ್ತು ನಷ್ಟದಲ್ಲಿರುವ ಬೇರೆ ಬೇರೆ ಬ್ಯಾಂಕ್‌ಗಳನ್ನು ಒಟ್ಟಿಗೆ ಸೇರಿಸುವ ಕೆಲಸ ಮಾಡುತ್ತಿರುವ ಸರ್ಕಾರ ಅಂಚೆ ಇಲಾಖೆಯನ್ನು ಆರು ಘಟಕಗಳಾಗಿ ವಿಭಜಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದರು
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನಾಲ್ಕು ಕಾರ್ಮಿಕ ಕಾಯಿದೆಗಳನ್ನು ತಕ್ಷಣ ರದ್ದು ಪಡಿಸಬೇಕೆಂದು ಒತ್ತಾಯಿಸಿದರು.
1991ರಲ್ಲಿ ಆರಂಭವಾದ ಆರ್ಥಿಕ ಉದಾರೀಕರಣದ ಫಲವಾಗಿ ದೇಶದಲ್ಲಿ ಇಂದು ಎಲ್ಲ ಸಾರ್ವಜನಿಕ ರಂಗದ ಉದ್ಯಮಗಳನ್ನು ಒಂದೊಂದಾಗಿ ಖಾಸಗೀಕರಣ ಮಾಡುವ ಪ್ರಕ್ರಿಯೆ ಶುರುವಾಗಿದ್ದು, ಇದಕ್ಕಾಗಿ ಒಂದು ಇಲಾಖೆಯನ್ನೇ ತೆರೆಯಲಾಗಿದೆ. ನವರತ್ನಗಳು ಎಂದು ಕರೆಯಲಾಗುವ ಸಾರ್ವಜನಿಕ ಉದ್ದಿಮೆಗಳನ್ನು ಕೂಡ ಮಾರಾಟ ಅಥವಾ ಖಾಸಗೀಕರಣ ಮಾಡಲು ಹೊರಟಿರುವುದು ಸರ್ಕಾರ ಆರ್ಥಿಕ ದಿವಾಳಿತನದ ಸಂಕೇತವಾಗಿದೆ ಎಂದು ಕಿಡಿಕಾರಿದರು.
ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಮಾತನಾಡಿ, ಬದಲಾಗುತ್ತಿರುವ ಗ್ರಾಹಕರ ಮನೋಭಾವಕ್ಕೆ ತಕ್ಕಂತೆ ಸೇವೆ ಒದಗಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆಯ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ನ್ಯಾಷಿನಲ್ ಫೆಡರೇಷನ್ ಆಫ್ ಪೋಸ್ಟಲ್ ಎಂಪ್ಲಾಯಿಸ್‌ನ ವಿಶ್ರಾಂತ ಸೆಕ್ರೇಟರಿ ಜನರಲ್ ಆರ್.ಎನ್.ಪರಾಶರ್ ಮಾತನಾಡಿ, ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಬೇಕೆಂದು ಸರ್ಕಾರದ ನಿರ್ಧಾರ ಸಂಪೂರ್ಣವಾಗಿ ಜನವಿರೋಧಿಯಾಗಿದೆ. ಹೊಸ ಪಿಂಚಣಿ ನೀತಿಯನ್ನು ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ವೃತ್ತದ ನ್ಯಾಷಿನಲ್ ಫೆಡರೇಷನ್ ಆಫ್ ಪೋಸ್ಟಲ್ ಎಂಪ್ಲಾಯಿಸ್‌ನ ಅಧ್ಯಕ್ಷ ಎ.ಶ್ರೀನಿವಾಸ್ ಇನ್ನಿತರರು ಇದ್ದರು.