ಜಿಲ್ಲೆ

ಅಂಗಾಂಗ ದಾನದಿಂದ ಐವರಿಗೆ ಪುನಸರ್ಜನ್ಮ

ಆರ್.ಕೃಷ್ಣ

ಮೈಸೂರು: ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನದಿಂದ ಐದು ಜನರಿಗೆ ಜೀವದಾನ ದೊರೆತಿದೆ.
ಗುಂಡ್ಲುಪೇಟೆಯ ಎಚ್.ಆರ್.ರಾಕೇಶ್(28) ಅವರ 2 ಕಿಡ್ನಿ, ಒಂದು ಲಿವರ್, ಹೃದಯ ಕವಾಟುಗಳು, ಕಾರ್ನಿಯಾದಿಂದ ಐವರಿಗೆ ಹೊಸ ಬದುಕು ದೊರೆತಂತಾಗಿದೆ.
ತಲೆಗೆ ತೀವ್ರ ಪೆಟ್ಟಾಗಿ ಪ್ರಜ್ಞಾಹೀನರಾಗಿದ್ದ ರಾಕೇಶ್ ಅವರನ್ನು ಜು.24ರಂದು ನಗರದ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆ ತಿರುಗುವಿಕೆ (ಗಿಡ್ಡಿನೆಸ್) ಎಂದು ಪರೀಕ್ಷೆಗೆ ಒಳಪಡಿಸಿದಾಗ ಮಿದುಳಿಗೆ ಗಂಭೀರ ಗಾಯವಾಗಿರುವುದು ಕಂಡು ಬಂದಿತ್ತು. ಇದರಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಾಲ್ಕು ದಿನದ ಚಿಕಿತ್ಸೆ ಬಳಿಕವೂ ಸುಧಾರಣೆ ಕಾಣದಿದ್ದರಿಂದ ನಿಯಮದ ಪ್ರಕಾರ ವೈದ್ಯರು ಬ್ರೈನ್ ಡೆಡ್ ಎಂದು ಘೋಷಿಸಿದರು.
ಬಳಿಕ ಕುಟುಂಬದವರು ಅಂಗಾಂಗ ದಾನಕ್ಕೆ ಮುಂದಾದರು. ಅಂಗಾಂಗಳನ್ನು ಅಪೋಲೋ ಬಿಜಿಎಸ್, ಜೆಎಸ್‌ಎಸ್ ಆಸ್ಪತ್ರೆ, ಬೆಂಗಳೂರಿನ ನಾರಾಯಣ ಹೃದಯಾಲಯ, ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅರ್ಹರಿಗೆ ಜೋಡಣೆ ಮಾಡಲಾಯಿತು. ಅಂಗಾಂಗ ಕಸಿಗೆ ಒಳಗಾಗುವ ರೋಗಿಗಳ ಕ್ರಾಸ್ ಮ್ಯಾಚಿಂಗ್ ಅನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಕೈಗೊಂಡಿರುವುದರಿಂದ ಬೆಂಗಳೂರಿಗೆ ತೆರಳುವ ಸಮಯ ಉಳಿಯುವ ಜತೆಗೆ, ಅಂಗಾಂಗ ಕಸಿಗೆ ಬೇಕಾಗುವ ನಿರ್ಣಾಯಕ ಸಮಯವೂ ಉಳಿತಾಯವಾಗುತ್ತಿದೆ ಎಂದು ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭಾರತೀಶ ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.