ಹುಬ್ಬಳ್ಳಿ: ಅಂಗಾಂಗ ದಾನ ಸ್ವೀಕಾರ ಕೇಂದ್ರವನ್ನು 8-10 ದಿನಗಳಲ್ಲಿ ಕಿಮ್್ಸ ಆಸ್ಪತ್ರೆಯಲ್ಲಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ತಿಳಿಸಿದರು.
ಮಂಗಳವಾರ ಕಿಮ್್ಸ, ಡಿಮ್ಹಾನ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕಿಮ್್ಸ ಉತ್ತರ ಕರ್ನಾಟಕದ ಸಂಜೀವಿನಿ ಇದ್ದಂತೆ. ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಸಹ ಇಲ್ಲಿಯೇ ನಡೆಯುವಂತಾಗಬೇಕು. ದೇಹ ತ್ಯಜಿಸಿದ ನಂತರ ಅಂಗಾಂಗಗಳು ಇನ್ನೊಬ್ಬರಿಗೆ ಉಪಯೋಗವಾಗಲಿವೆ ಎಂಬ ಕುರಿತು ‘ಜೀವ ಸಾರ್ಥಕತೆ’ ಯೋಜನೆಯಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದರು. ಕಿಮ್ಸ್ನಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆ ಭರ್ತಿ ಮಾಡಿಕೊಳ್ಳಲಾಗುವುದು. ಅಗತ್ಯ ತಾಂತ್ರಿಕ ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ತೆಗೆದುಕೊಳ್ಳುತ್ತೇವೆ. ಕೆಲ ವೈದ್ಯರು ಹಾಜರಿ ಹಾಕಿ ಖಾಸಗಿ ಆಸ್ಪತ್ರೆಯ ಕರ್ತವ್ಯಕ್ಕೆ ಹೋಗುತ್ತಾರೆಂಬ ದೂರುಗಳಿದ್ದು, ಒಂದಕ್ಕಿಂತ ಹೆಚ್ಚು ಸಲ ಬಯೋಮೆಟ್ರಿಕ್ ಹಾಜರಾತಿ ಪಡೆಯುವುದು ಸೇರಿ ತಂತ್ರಜ್ಞಾನ ಆಧರಿತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೌಷ್ಟಿಕ ಆಹಾರ ವಿತರಣೆಗೆ ಸೂಚನೆ: ಶಿಶು ಹಾಗೂ ತಾಯಂದಿರ ಮರಣ ಪ್ರಮಾಣ ಉಳಿದ ಜಿಲ್ಲೆಗಳಿಗಿಂತ ಜಾಸ್ತಿಯಿದೆ. ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ಹಾಗೂ ಕಬ್ಬಿಣ ಅಂಶದ ಮಾತ್ರೆಗಳನ್ನು ಗರ್ಭಿಣಿಯರಿಗೆ ವಿತರಿಸಲು ನಿರ್ದೇಶನ ನೀಡಲಾಗಿದೆ. ಆಹಾರ ಸಂರಕ್ಷಣೆ ಅಧಿಕಾರಿ ಹಾಗೂ ಔಷಧ ನಿಯಂತ್ರಣಾಧಿಕಾರಿಗಳು ಶುಚಿತ್ವ, ಔಷಧ ವಿತರಣೆ ಬಗ್ಗೆ ನಿಯಂತ್ರಣ ವಹಿಸಬೇಕೆಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಎಂಎಲ್ಸಿ ಎಸ್.ವಿ. ಸಂಕನೂರ, ಈರಣ್ಣ ಜಡಿ, ಆರೋಗ್ಯ ಇಲಾಖೆ ನಿರ್ದೇಶಕ ಡಾ. ಪಾಟೀಲ ಓಂ ಪ್ರಕಾಶ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಪಿ.ಜಿ. ಗಿರೀಶ ,ಡಿಸಿ ನಿತೇಶ ಪಾಟೀಲ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಟಿಎಚ್ಒ ಡಾ. ಯಶವಂತ ಮದೀನಕರ, ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಇತರರು ಇದ್ದರು.
ಪಿಎಚ್ಸಿ ಮೇಲ್ದರ್ಜೆಗೆ: ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್ಸಿ)ಮೇಲ್ದರ್ಜೆಗೆ ಏರಿಸಲಾಗುವುದು. ಪ್ರತಿ ಕೇಂದ್ರಕ್ಕೆ ಒಬ್ಬ ಎಂಬಿಬಿಎಸ್, ಒಬ್ಬ ಆಯುಷ್ ವೈದ್ಯಾಧಿಕಾರಿ ಸೇರಿ ಮೂವರು ವೈದ್ಯರನ್ನು ನೇಮಿಸಿ 24 ಗಂಟೆ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. ಡಿ ದರ್ಜೆ ಮತ್ತು ನರ್ಸಿಂಗ್ ಸಿಬ್ಬಂದಿಯನ್ನು ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ನೇಮಕಾತಿ ಮಾಡಿಕೊಳ್ಳಲಾಗುವುದು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ವಿಮಾ ಯೋಜನೆಯಡಿ ಹೆಚ್ಚಿನ ಶಸ್ತ್ರಚಿಕಿತ್ಸೆ ಗುರಿಯನ್ನು ಆರೋಗ್ಯ ಕೇಂದ್ರಗಳಿಗೆ ನಿಗದಿ ಮಾಡಲಾಗಿದೆ ಎಂದು ಸಚಿವ ಸುಧಾಕರ ತಿಳಿಸಿದರು. ಅಳ್ನಾವರ ಹಾಗೂ ಅಣ್ಣಿಗೇರಿ ಪಿಎಚ್ಸಿಗಳನ್ನು ತಾಲೂಕು ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. 6 ವರ್ಷದ ಒಳಗಿನ ಮಕ್ಕಳ ದೈಹಿಕ ಆರೋಗ್ಯ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗುವುದು. ಇದರಿಂದ ಮುಂದೆ ಅವರ ಆರೋಗ್ಯ ರಕ್ಷಣೆಗೆ ಅನುಕೂಲವಾಗಲಿದೆ ಎಂದರು.
ಬ್ಯಾಹಟ್ಟಿಗೆ ಭೇಟಿ: ಪ್ರಗತಿ ಪರಿಶೀಲನೆ ಸಭೆ ಬಳಿಕ ಸಚಿವ ಡಾ. ಸುಧಾಕರ ಅವರು ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕಿತ್ಸಾ ಕೊಠಡಿ, ಔಷಧಾಲಯ, ಪ್ರಯೋಗಾಲಯ, ಪ್ರಸೂತಿ ಕೇಂದ್ರಗಳಿಗೆ ತೆರಳಿ ಪರಿಶೀಲಿಸಿದರು. ಗ್ರಾಮಸ್ಥರು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಸಚಿವರಿಗೆ ಮನವಿ ಮಾಡಿದರು. ತಾಲೂಕು ವೈದ್ಯಾಧಿಕಾರಿ ಡಾ. ಆರ್.ಎಸ್. ಹಿತ್ತಲಮನಿ, ಪಿಎಚ್ಸಿ ವೈದ್ಯಾಧಿಕಾರಿ ಡಾ. ಎನ್.ಬಿ. ಕರ್ಲವಾಡ, ಇತರರು ಇದ್ದರು.
ಸಚಿವರಿಗೆ ಘೇರಾವ್ : ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಸಚಿವ ಸುಧಾಕರ ಅವರೊಂದಿಗೆ ವಾಗ್ವಾದಕ್ಕಿಳಿದ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಘೕರಾವ್ ಹಾಕಿದರು. ನಾರಾಯಣಗೌಡ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ ಎಂದು ಆರೋಪಿಸಿದರು. ಕ್ಷಮೆ ಕೇಳಲು ಆಗ್ರಹಿಸಿ ಕಾರಿಗೆ ಅಡ್ಡಲಾಗಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.