ಚಿತ್ರದುರ್ಗ: ಛಲ, ಕಠಿಣ ಪರಿಶ್ರಮವಿದ್ದರೆ ಸಾಧನೆಗೆ ಅಂಗವಿಕಲತೆ ಎಂದಿಗೂ ಅಡ್ಡಿಯಾಗದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಸಲಹೆ ನೀಡಿದರು.
ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಅಂಗವಿಕಲರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕ್ಷೇತ್ರದ ಸ್ವಯಂ ಸೇವಾ ಸಂಸ್ಥೆಗಳಿಂದ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಅಂಗವಿಕಲರು ಪ್ಯಾರಾ ಒಲಂಪಿಕ್ ಸೇರಿ ವಿವಿಧ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಹೀಗಾಗಿ ತಮ್ಮ ದೈಹಿಕ ನ್ಯೂನತೆಗಳ ಕುರಿತು ಕೀಳರಿಮೆ ಬಿಡಬೇಕು. ಗುರಿಯೊಂದಿಗೆ ಕ್ರಿಯಾಯೋಜನೆ ರೂಪಿಸಿಕೊಂಡು ಸಾಧಕರಾಗಬೇಕು. ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಗೌರವಯುತವಾಗಿ, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಈ ಬಾರಿ ಅಂಗವಿಕಲರ ಸಪ್ತಾಹ ಕಾರ್ಯಕ್ರಮ ಆಯೋಜಿಸಿದ್ದು, ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆ, ಕಾನೂನು ಅರಿವು-ನೆರವು, ಶಾಲಾ-ಕಾಲೇಜುಗಳಲ್ಲೂ ಅಂಗವಿಕಲ ವಿದ್ಯಾರ್ಥಿಗಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗಮನಸೆಳೆದ ಕ್ರೀಡಾಕೂಟ: ಕ್ರೀಡಾ ವಿಭಾಗದಲ್ಲಿ ಶ್ರವಣ ದೋಷ, ದೈಹಿಕ ಅಂಗವಿಕಲರಿಗೆ 100ಮೀ ಓಟ, ಗುಂಡು ಎಸೆತ, ಜಾವಲಿನ್ ಥ್ರೋ, ಬುದ್ಧಿಮಾಂದ್ಯರಿಗೆ 100ಮೀ ಓಟ, ಬಕೆಟ್‌ನಲ್ಲಿ ರಿಂಗ್ ಎಸೆತ, ಮ್ಯೂಜಿಕಲ್ ಚೇರ್, ಅಂಧರಿಗೆ ಮಡಿಕೆ ಹೊಡೆಯುವುದು, ಕೇನ್ ರೇಸ್ ಸ್ಪರ್ಧೆಗಳು ನಡೆದವು. ಕ್ರೀಡಾಪಟುಗಳು ಗಮನ ಸೆಳೆದರು. ಸಾಂಸ್ಕೃತಿಕ ವಿಭಾಗದಲ್ಲಿ ದೃಷ್ಟಿದೋಷ, ದೈಹಿಕ ಮತ್ತು ಬೌದ್ಧಿಕ ಅಂಗವಿಕಲರಿಗೆ ಜಾನಪದ, ಭಾವ, ಭಕ್ತಿಗೀತೆ ಸ್ಪರ್ಧೆಗಳು ಜರುಗಿದವು. ಅತ್ಯುತ್ಸಾಹದಿಂದ ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ವಿಜಯ್‌ಕುಮಾರ್, ಸೋಮಶೇಖರ್, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಂ.ವೀಣಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲೇಶ್ ಇತರರಿದ್ದರು.