ಅರಕಲಗೂಡು: ಪಟ್ಟಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ವಿಕಲ ಚೇತನರ ದಸರಾ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತ
ಶಿಕ್ಷಕರ ಭವನದ ಆವರಣದಲ್ಲಿ ಬೆಳಗ್ಗೆ ನಡೆದ ಕ್ರೀಡಾ ಕೂಟಕ್ಕೆ ಹಾಸನದ ಅಂಗವಿಕಲ ಕ್ರೀಡಾಪಟು ಆಂತೋಣಪ್ಪ ಚಾಲನೆ ನೀಡಿದರು. ಗುಂಡು ಎಸೆತ, ಚಕ್ರ ಏಸೆತ, 200 ಮೀ ಓಟ, ವಿಷಲ್ ಬಾಲ್ ಸ್ಫರ್ಧೆಗಳನ್ನು ನಡೆಸಲಾಯಿತು. ಸ್ಫರ್ದಿಗಳು ಅತ್ಯಂತ ಉತ್ಸಾಹದಿಂದ ಕ್ರೀಡಾ ಕೂಟದಲ್ಲಿ ಪಾಲ್ಗೊಂಡರು.
ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಅಂಗವಿಕಲರು ತಮ್ಮದೆ ಆದ ಪ್ರತಿಭೆ ಹೊಂದಿದ್ದು ಪ್ರೋತ್ಸಾಹ ನೀಡಿದರೆ ಅವರೂ ಈ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು ಎಂದರು.
ದೊಡ್ಡ ಮಠದ ಮಠಾಧೀಶ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾನವ ಕಂಪ್ಯೂಟರ್ ಎಂದೆ ಖ್ಯಾತರಾದ ಹಾಸನದ ಅಂಧ ಕ್ರೀಡಾ ಸಾದಕ ಲೋಕೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮ, ತಾಪಂ ಇಒ ಎಂ.ಎಸ್. ಗಿರಿಧರ್, ಬಿಇಒ ದೇವರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ ಪುಷ್ಪಲತಾ, ಸಿಡಿಪಿಒ ಇಂದಿರಾ, ಶಾಂತಕುಮಾರ್, ಉಪನ್ಯಾಸಕ ದಿನೇಶ್, ತಾಲ್ಲಕು ಅಂಗವಿಕಲರ ಸಂಘದ ಜಿ.ಜಿ. ಕೇಶವ ಉಪಸ್ಥಿತರಿದ್ದರು.
ಗೀತ ಗಾಯನ ಸ್ಫರ್ಧೆ, ಹಾಗೂ ಶ್ರೀ ಕೃಷ್ಣ ಸಂಧಾನ ಪೌರಾಣಿಕ ರಂಗ ದೃಶ್ಯಾವಳಿ ಪ್ರದರ್ಶನ ನಡೆಯಿತು. 5 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ಅಂಗವಿಕಲರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.