ಯಳಂದೂರು: ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ತಾಲೂಕು ಪಂಚಾಯಿತಿಯ 2024-25 ನೇ ಸಾಲಿನ ಅನಿರ್ಬಂಧಿತ ಶೇ.5ರಷ್ಟು ಅಂಗವಿಕಲರ ಅನುದಾನದಲ್ಲಿ ಲ್ಯಾಪ್‌ಟಾಪ್‌ಗಳನ್ನು ಶನಿವಾರ ಶಾಸಕ ಎ.ಆರ್. ಕೃಷ್ಣಮೂರ್ತಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಆಯಾ ಪಂಚಾಯಿತಿ ವ್ಯಾಪ್ತಿಯ ಅಂಗವಿಕಲರ ಮಾಹಿತಿಯನ್ನು ಕಲೆ ಹಾಕಿ ಸರ್ಕಾರದಿಂದ ಲಭಿಸುವ ಸೌಲಭ್ಯಗಳ ದಾಖಲೆಗಳನ್ನು ಕ್ರೋಡೀಕರಿಸಬೇಕು. ಇದನ್ನು ಸರ್ಕಾರ, ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿಯನ್ನು ಕಳುಹಿಸಲು ಅನುಕೂಲವಾಗುವಂತೆ ನಮಗೆ ಲ್ಯಾಪ್‌ಟಾಪ್‌ಗಳು ಬೇಕೆಂದು ಬೇಡಿಕೆ ಸಲ್ಲಿಸಿದ್ದರು. ಯಳಂದೂರು ತಾಲೂಕಿನಲ್ಲಿ ಒಟ್ಟು 12 ಗ್ರಾಮ ಪಂಚಾಯಿತಿಗಳಿದ್ದು ಇದರಲ್ಲಿ ಎಲ್ಲ ಪಂಚಾಯಿತಿಗಳ ಪುನರ್ವಸತಿ ಕಾರ್ಯಕರ್ತರಿಗೂ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುತ್ತಿದೆ. ಇದರಿಂದ ಯಳಂದೂರು ತಾಲೂಕಿನಲ್ಲಿರುವ 1950ಕ್ಕೂ ಹೆಚ್ಚು ಅಂಗವಿಕಲರಿಗೆ ಅನುಕೂಲವಾಗಲಿದೆ. ಕಾರ್ಯಕರ್ತರು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಅನುದಾನದಲ್ಲಿ ಹೊನ್ನೂರು, ಅಗರ-ಮಾಂಬಳ್ಳಿ ಹಾಗೂ ಗೌಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನೂ ಕೂಡ ವಿತರಣೆ ಮಾಡಲಾಯಿತು. ಇದನ್ನೂ ಕೂಡ ಗ್ರಾಮೀಣ ಆರೋಗ್ಯವೃದ್ಧಿಗಾಗಿ ನೀಡಲಾಗುತ್ತಿದ್ದು, ಇದರಿಂದ ಹೃದಯಸಂಬಂಧಿ ಕಾಯಿಲೆಗಳನ್ನು ತಕ್ಷಣ ಪತ್ತೆ ಹೆಚ್ಚಿ ಹೆಚ್ಚಿನ ಚಿಕಿತ್ಸೆಗೆ ತಾಲೂಕು, ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸಲು ಅನುಕೂಲವಾಗಲಿದೆ. ಸಂಬಂಧಪಟ್ಟವರು ಇದನ್ನು ಸದಾ ಸುಸ್ಥಿತಿಯಲ್ಲಿಟ್ಟುಕೊಂಡು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ತಹಸೀಲ್ದಾರ್ ನಯನಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ರಾಮಚಂದ್ರಯ್ಯ, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಪಪಂ ಅಧ್ಯಕ್ಷೆ ಲಕ್ಷ್ಮೀಮಲ್ಲು, ತಾಪಂ ಇಒ ಉಮೇಶ್, ಸಿಪಿಐ ಶ್ರೀಕಾಂತ್ ಪಿಎಸ್‌ಐ ಆಕಾಶ್ ಹಿರಿಯ ಕಾರ್ಮಿಕ ನಿರೀಕ್ಷಕ ವಿ.ಎಲ್. ಪ್ರಸಾದ್ ಮುಖಂಡರಾದ ಕಂಹದಳ್ಳಿ ನಂಜುಂಡಸ್ವಾಮಿ, ಜಯಣ್ಣ, ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾಪುರ ದೇವರಾಜು ಸೇರಿದಂತೆ ಅನೇಕರು ಇದ್ದರು.