ಕಿಕ್ಕೇರಿ: ಅಂಗವಿಕಲರಿಗೆ ಅನುಕಂಪದ ಬದಲಿಗೆ ಅವಕಾಶಗಳನ್ನು ನೀಡಿದರೆ ಅವರು ಉನ್ನತಮಟ್ಟದಲ್ಲಿ ಸಾಧನೆ ತೋರುತ್ತಾರೆ ಎಂದು ವೈದ್ಯಾಧಿಕಾರಿ ಡಾ. ರೋಹಿತ್ ತಿಳಿಸಿದರು.
ಸಮೀಪದ ಹಿರೀಕಳಲೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಗವಿಕಲರಿಗೆ ಹಮ್ಮಿಕೊಂಡಿದ್ದ ಸಾಮಾಜಿಕ ಜಾಗೃತಿ, ಕಿವುಡುತನ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿವುಡುತನ ಶಾಪವಲ್ಲ. ಕಿವುಡುತನ ತಡೆಗಟ್ಟಲು ಆರಂಭದಲ್ಲಿ ಗುರುತಿಸುವುದು ಮುಖ್ಯ. ಇಂತಹ ಪ್ರಕರಣಗಳು ಬಾರದಂತೆ ಇಎನ್‌ಟಿ ಹಾಗೂ ಆಡಿಯೋಲಾಜಿ ತಜ್ಞರು ಲಭ್ಯವಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹವರಿಗೆ ತಪಾಸಣೆ, ಶ್ರವಣ ಸಾಧನ ವಿತರಣೆ ಮಾಡಲಾಗುತ್ತದೆ. ಈ ಬಗ್ಗೆ ಅರಿವು ಮೂಡಿಸುವುದು ಸಮುದಾಯದ ಕರ್ತವ್ಯ ಎಂದರು.
ಡಾ. ಶಿವಕುಮಾರ್, ಆಡಿಯೋಲಾಜಿಸ್ಟ್ ನೇಹಾ, ತೇಜಸ್, ಸಿಬ್ಬಂದಿಗಳಾದ ನಂಜುಂಡ, ಧನಲಕ್ಷ್ಮೀ, ತ್ರಿವೇಣಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.