ಬೇಲೂರು: ಅಂಗವಿಕಲರಿಗೆ ಅನುಕಂಪಕ್ಕಿಂತ ಅವಕಾಶಗಳನ್ನು ನೀಡಿದರೆ ಸಾಮಾನ್ಯರಿಗಿಂತಲೂ ಅವರು ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೇಳಿದರು.
ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಪಟ್ಟಣದ ಬಿಆರ್‌ಸಿ ಕೇಂದ್ರದ ಆವರಣ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ವ ಶಿಕ್ಷಣ ಅಭಿಯಾನದಿಂದ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲರಿಗೆ ಸಿಗುವ ಎಲ್ಲ ಸೌಲಭ್ಯ ಕೊಟ್ಟು ಸಮಾಜದ ಮುಖ್ಯ ವಾಹಿನಿಗೆ ಕರೆ ತರುವ ಕೆಲಸವಾಗಬೇಕು. ಹಾಗ ಮಾತ್ರ ಅಂಗವಿಕಲರು ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಲು ಸಾಧ್ಯವಾಗುತ್ತದೆ. ಮತ್ತು ಈ ಮಕ್ಕಳಿಗೆ ಅವರ ಜೀವನ ಕೌಶಲ್ಯ ತರಭೇತಿ ಕೊಡಲಾಗುತ್ತಿದೆ. ಕೆಲ ಮಕ್ಕಳಿಗೆ ಮನೆಯಲ್ಲೆ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ ಅಂಗವಿಕಲರು ಮಾನಸಿಕವಾಗಿ ಸೌಮಧರ್ಯವಂತರಾಗಿದ್ದು, ದೈಹಿಕವಾಗಿ ಅಂಗವಿಕಲರಾಗಿದ್ದಾರೆ. ಪೋಷಕರು ತಾಳ್ಮೆ ಸಹಕಾರದಿಂದ ಆ ಮಕ್ಕಳ ಬೆಳವಣಿಗೆಗೆ ಮುಂದಾಗಬೇಕು. ನಿಮ್ಮೊಂದಿಗೆ ನಾವುಗಳಿರುತ್ತೇವೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಶವಮರಿಯಪ್ಪ ಮಾತನಾಡಿ, ಅಂಗವಿಕಲ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಹೆಚ್ಚಿನ ಜ್ಞಾನ ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಬೇರೆ ಮಕ್ಕಳಂತೆ ಇವರಿಗೂ ಸಾಮಾನ್ಯ ಶಿಕ್ಷಣ ನೀಡುತ್ತೇವೆ. ಮತ್ತು ಮಕ್ಕಳು ಅಂಗವಿಕಲರಾಗಿ ಹುಟ್ಟಿದರೆ ಮೂಡ ನಂಬಿಕೆಗಳಿಗೆ ಪೋಷಕರು ಒಳಗಾಗಿ ಹೆಚ್ಚಿನ ಚಿಕಿತ್ಸೆ ಕೊಡಿಸುವಲ್ಲಿ ಹಿಂದುಳಿಯುತ್ತಾರೆ. ಇದನ್ನು ನಿಲ್ಲಿಸಿ ಮಕ್ಕಳ ಬೆಳವಣಿಗೆಗಾಗಿ ಚಿಕಿತ್ಸೆ ಕೊಡಿಸಬೇಕು. ಮತ್ತು ಅಂಗವಿಕಲತೆ ಶಾಪವಲ್ಲ. ವ್ಯಕ್ತಿಯ ದೇಹದಲ್ಲಾಗುವ ಕೆಲ ಬದಲಾವಣೆಯಿಂದ ಅಂಗವಿಕಲರಾಗಿದ್ದಾರೆ ಹೊರತು ಬೇರೇನು ಅಲ್ಲ. ಆದ್ದರಿಂದ ಪೋಷಕರ ಜವಬ್ದಾರಿ ಹೆಚ್ಚಿದೆ. ಮಕ್ಕಳು ಸ್ವತ: ತಾವೆ ತಮ್ಮ ಕೆಲಸ ಮಾಡಿಕೊಳ್ಳಲು ಮುಂದಾಗುವವರೆಗೂ ತಾಳ್ಮೆಯಿಂದ ಇರಬೇಕು. ಈ ಮಕ್ಕಳಿಗೆ ನೀವೇ ದೊಡ್ಡ ದೇವರಿದ್ದಂತೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ರಾಜೇಗೌಡ, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮುಳ್ಳಯ್ಯ, ನಿಸ್ವಾರ್ಥ ಗೆಳೆಯರ ಬಳಗದ ಉಪಾಧ್ಯಕ್ಷ ಹೇಮಂತ್, ಅಂಗವಿಕಲರ ಸಂಘದ ಅಧ್ಯಕ್ಷ ಪುರುಶೋತ್ತಮ, ಆರೋಗ್ಯ ಇಲಾಖೆಯ ಕುಮಾರ್, ಶಶಿಧರ್, ಬಸವರಾಜಪ್ಪ, ರಾಜಶೇಖರ್, ಶಿವಮೂರ್ತಿ ಸೇರಿದಂತೆ ಇತರರಿದ್ದರು.