ಚಿತ್ರದುರ್ಗ: ಲೋಕಸಭಾ ಚುನಾವಣೆ ಮತದಾನ ಪ್ರಮಾಣದ ಹೆಚ್ಚಿಸುವ ನಿಟ್ಟಿನಲ್ಲಿ ನಗರದಲ್ಲಿ ಶನಿವಾರ ಅಂಗವಿಕಲರು ನಡೆಸಿದ ದ್ವಿಚಕ್ರ ಮೋಟಾರ್ ವಾಹನಗಳ ರ‌್ಯಾಲಿ ಗಮನ ಸೆಳೆಯಿತು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರ‌್ಯಾಲಿಗೆ ನಗರ ಒನಕೆ ಓಬವ್ವ ವೃತ್ತದಲ್ಲಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕಡಿಮೆ ಮತದಾನ ಪ್ರದೇಶಗಳಲ್ಲಿ ಹಾಗೂ ಅರ್ಹ ಮತದಾರರು ಯಾರೂ ಮತದಾನದಿಂದ ಹೊರಗುಳಿಯಬಾರದೆಂಬ ಉದ್ದೇಶದಿಂದ ಸ್ವೀಪ್ ಸಮಿತಿ ಮತದಾನದ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದರು.
ಅಂಗವಿಕಲರು, ಯುವಲಕರು, ಮಹಿಳೆ ಸೇರಿ ಪ್ರತಿಯೊಬ್ಬ ಅರ್ಹ ಮತದಾರರು ಏ.26ರಂದು ನಡೆಯುವ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಬೇಕು. ಆ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕಿದೆ ಎಂದು ತಿಳಿಸಿದರು.
ಒನಕೆ ಓಬವ್ವ ವೃತ್ತದಿಂದ ಆರಂಭವಾದ ರ‌್ಯಾಲಿ, ಮದಕರಿ ನಾಯಕ, ಅಂಬೇಡ್ಕರ್, ಮಹಾವೀರ, ಎಸ್‌ಬಿಎಂ, ಗಾಂಧಿ ವೃತ್ತದ ಮೂಲಕ ಸಂಗೋಳ್ಳಿ ರಾಯಣ್ಣ, ಕನಕ ವೃತ್ತದವರೆಗೆ ಸಂಚರಿಸಿ ಮರಳಿ ಒನಕೆ ಓಬವ್ವ ವೃತ್ತದಲ್ಲಿ ಸಮಾಪನಗೊಂಡಿತು. ಅಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು.
ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಬಲಗೊಳಿಸಿ, ಕಾಡು ರಕ್ಷಣೆಗೆ ಬದ್ಧರಾಗೋಣ-ಮತ ಹಾಕಲು ಸಿದ್ಧರಾಗೋಣ, ಓದು ವ್ಯಕ್ತಿತ್ವ ರೂಪಿಸುತ್ತದೆ-ಮತದಾನ ದೇಶ ರೂಪಿಸುತ್ತದೆ, ಮತದಾನ ಪ್ರತಿಯೊಬ್ಬರ ಹಕ್ಕು, ಮತದಾನ ಪ್ರತಿ ನಾಗರಿಕನ ಕರ್ತವ್ಯ, ನನ್ನ ದೇಶ ನನ್ನ ಹಕ್ಕು, ನನ್ನ ಮತ ನನ್ನ ಹಕ್ಕು, ಮತದಾನಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ, ಜಾಗೃತ ಮತದಾರ ಪ್ರಜಾಪ್ರಭುತ್ವದ ನೇತಾರ, ನಮ್ಮ ಮತ ಅಮೂಲ್ಯವಾದದ್ದು, ಬನ್ನಿ ಮತದಾನ ಕೇಂದ್ರಕ್ಕೆ, ಪ್ರಜಾಪ್ರಭುತ್ವದಲ್ಲಿ ಮತದಾನವೇ ಹಬ್ಬ, ಯೋಚಿಸಿ ಮತ ಹಾಕೋಣ, ಅದರಲ್ಲೇ ದೇಶದ ಹಿತ ಕಾಯೋಣವೆಂಬ ಸಂದೇಶಗಳನ್ನು ಸಾರುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಂ.ವಿ.ವೀಣಾ, ತಾಪಂ ಇಒ ಅನಂತರಾಜು, ಸಹಾಯಕ ನಿರ್ದೇಶಕ ಯರ‌್ರಿಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ, ಜಿಲ್ಲಾ ಸ್ವೀಪ್ ಸಮಿತಿ ಸಂಯೋಜಕಿ ಸುಷ್ಮಾರಾಣಿ, ಎನ್.ಮೈಲಾರಪ್ಪ ಮತ್ತಿತರರು ಇದ್ದರು.