ಬಾಗಲಕೋಟೆ: ಪ್ರತಿಯೊಬ್ಬ ಅಂಗವಿಕಲರಲ್ಲಿ ಒಂದೊಂದು ಶಕ್ತಿ, ಕೌಶಲವಿರುತ್ತದೆ. ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದು ಸಂಸದ ಪಿ.ಸಿ.ಗದ್ದಗೌಡರ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲರ ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ಬರುತ್ತಿರುವುದನ್ನು ನೋಡುತ್ತಿದ್ದೇವೆ. ಅಂಗವೈಕಲ್ಯವಿದ್ದರೂ ಅವರಲ್ಲಿ ಏಕಾಗ್ರತೆ, ಶಕ್ತಿ ಇದೆ. ದೇಶದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಢುವ ಮೂಲಕ ದೇಶದ ಹೆಸರು ತಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ. ಜಿಲ್ಲೆಯಲ್ಲಿರುವ ಅಂಗವಿಕಲರ ಸರ್ವೇ ಮಾಡಿ ಎಲ್ಲರಿಗೂ ಸೌಲಭ್ಯ ಒದಗಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಕೆಲವೊಂದು ಕಾರಣಗಳಿಂದ ಅಂಗ ವೈಕಲ್ಯದಿಂದ ಹುಟ್ಟುತ್ತಿದ್ದಾರೆ. ಆದರೆ ದೇವರು ಅವರಿಗೆ ವಿಶೇಷ ಶಕ್ತಿಯನ್ನು ಕೊಟ್ಟಿರುತ್ತಾನೆ. ಪಾಲಕರು ಇದನ್ನು ಅರಿತು ಅವರು ಕೂಡಾ ಸ್ವಾವಲಂಬಿ ಬದುಕು ನಡೆಸಯವಂತೆ ಮಾಡಬೇಕು. ಕಿರಸೂರಿನ ದೀಲಿಪ್ ರೊಳ್ಳಿ ಎಂಬ ಅಂದತ್ವಹೊಂದಿದ ಯುವಕ ಸ್ನಾಕತೋತ್ತರವರೆಗೆ ಶಿಕ್ಷಣ ಮುಗಿಸಿ, ಸದ್ಯ ಜಿಲ್ಲಾ ಖಜಾನೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಅಂಗವಿಕಲರ ಬಗ್ಗೆ ಹಿಂದೆ ತಾತ್ಸಾರ ಭಾವನೆಯಿಂದ ನೋಡುತ್ತಿದ್ದರು. ಈಗ ಆ ದೃಷ್ಠಿ ಕೋನ ಬದಲಾವಣೆಯಾಗಿದೆ. ಅವರು ಸಹ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅಂತದೊಂದು ಶಕ್ತಿ ದೇವರು ಅವರಿಗೆ ನೀಡಿರುತ್ತಾನೆ ಎಂದು ತಿಳಿಸಿದರು.
ಶಾಸಕ ಎಚ್.ವೈ.ಮೇಟಿ ಮಾತನಾಡಿದರು. ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನಿತ್ ಸೇರಿದಂತೆ ಎಸ್.ಎಚ್.ಗುಳೇದ, ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಇದ್ದರು.