ಜಿಲ್ಲೆ

ಅಂಗವಿಕಲರ ಮೇಲೆ ತಾತ್ಸಾರ ಭಾವನೆ ಸಲ್ಲದು

*ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯ *ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

ಚಾಮರಾಜನಗರ: ವಿಶೇಷ ಚೇತನರಿಗೆ ಸರ್ಕಾರದ ವಿವಿಧ ರೀತಿಯ ಸೌಲಭ್ಯವನ್ನು ಹಾಗೂ ಶಿಕ್ಷಣ, ಉದ್ಯೋಗ ನೀಡುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ ಇದರ ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಸಾಮಾನ್ಯರಂತೆ ಜೀವನ ನಡೆಸಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ನಗರದ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ವಿಕಲಚೇತನರ ಸಬಲೀಕರಣ ಕ್ಷೇತ್ರದಲ್ಲಿ ಭಾಗಿಯಾಗಿರುವ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷ ಚೇತನರಿಗೆ ಪ್ರಪಂಚದ ಅನೇಕ ಮಕ್ಕಳು ಆರೋಗ್ಯವಾಗಿ ಜನ್ಮ ತಾಳುತ್ತವೆ. ಆದರೆ ಕೆಲವೇ ಕೆಲವು ಮಕ್ಕಳು ವಿಕಲ ಚೇತನರಾಗಿ ಹುಟ್ಟುತ್ತಾರೆ. ಇತರರಂತೆ ಬಾಳಲು ಅವಕಾಶವಾಗಿಲ್ಲ. ಅಂತವರಿಗೆ ಸರ್ಕಾರ ಪ್ರೋತ್ಸಾಹ ನೀಡಲು ತಾವು ಕೂಡ ಸಾಮಾನ್ಯರಂತೆ ಜೀವನವನ್ನು ನಿರ್ವಹಣೆ ಮಾಡಬೇಕು ಎಂಬ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಶೇಷ ಚೇತನರಿಗೆ ಅನೇಕ ರೀತಿಯ ಸೌಲಭ್ಯವನ್ನು ನೀಡುತ್ತಿದೆ ಎಂದರು.

ಜಿಲ್ಲೆಯಲ್ಲಿ 18 ಸಾವಿರಕ್ಕೂ ಹೆಚ್ಚು ವಿಶೇಷ ಚೇತನರು ಇರುವದನ್ನು ಕಾಣುತ್ತೇವೆ. ಶಿಕ್ಷಣ ಪಡೆಯುವ ವಿಶೇಷಚೇತನ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನ ಹಾಗೂ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕವನ್ನು ಹಾಗೂ ಸಾಧನಾ ಸಲಕರಣೆಯನ್ನು ನೀಡುವ ಅವಕಾಶವಿದೆ ಎಂದರು.

ಗ್ರಾಮೀಣ ಪುನರ್ ವಸತಿ ಯೋಜನೆಯಲ್ಲಿ ವಿಶೇಷ ಚೇತನರು 123 ಪಂಚಾಯಿತಿಗಳಲ್ಲಿ ಒಟ್ಟು 134 ಪುನರ್ ವಸತಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಷೇಶಚೇತನರಿಗೆ ಮಾಹಿತಿ ಕೇಂದ್ರವನ್ನು ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿದೆ ಇಂದು ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಗಿದೆ ಎಂದರು.

ವಿಕಲಚೇತನರನ್ನು ತಾತ್ಸರ ಮನೋಭಾವ ಹಾಗೂ ಕೀಳರಿಮೆಯಿಂದ ದೂರ ಮಾಡಲು ಇಂತಹ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮಗಳನ್ನು ಸರ್ಕಾರ ಮಾಡಲಾಗುತ್ತಿದೆ. ವಿಶೇಷ ಚೇತನರಿಗೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟವನ್ನು ಆಯೋಜಿಸುತ್ತಾರೆ. ನಮ್ಮ ದೇಶದವರು ಪ್ಯಾರಾಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹಾಗಾಗಿ ವಿಕಲಚೇತನರು ಕೀಳರಿಮೆಯಿಂದ ಜೀವನ ನಡೆಸದೇ ಸಾಮಾನ್ಯರಂತೆ ಜೀವನ ನಡೆಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮಾತನಾಡಿ, ಜಿಲ್ಲೆಯಲ್ಲಿ 18,400 ವಿಶೇಷ ಚೇತನರು ಎಂದು ಗುರುತಿಸಲಾಗಿದ್ದು, ಯುಡಿ ಐಡಿ 17,414 ಕಾರ್ಡ್ ನೀಡಲಾಗಿದೆ. ಇನ್ನೂ 1200 ಯುಡಿ ಕಾರ್ಡ್ ನೀಡಬೇಕಿದೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸರ್ವೇ ಮಾಡಿಸಿ ವಿಕಲ ಚೇತನರಿಗೆ ಯುಡಿ ಕಾರ್ಡ ಗಳನ್ನು ವಿತರಿಸಲಾಗುವುದು ಎಂದರು.

ವಿಶೇಷ ಚೇತನ ಮಕ್ಕಳಿಗಾಗಿ ಜಿಲ್ಲೆಯಲ್ಲಿ ವಿಶೇಷ ಚೇತನರ ಸ್ನೇಹಿ ಪಾರ್ಕ್ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿದೆ. ರಾಜ್ಯದಲ್ಲೇ ವಿನೂತನ ಪ್ರಯತ್ನವಾಗಲಿದೆ ಇದರ ಜೊತೆಗೆ ಜಿಲ್ಲಾ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ರಂಥಾಲಯದಲ್ಲಿ ಬ್ರೈನ್ ಸೆಂಟರ್ ತೆರೆಯಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ ಪುಟ್ಟರಂಗಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭಾ ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಚಿದಂಬರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ:

ಎಸ್ ಎಸ್ ಎಲ್ ಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿಶೇಷಚೇತನ ವಿದ್ಯಾರ್ಥಿಗಳಾದ ಲಲಿತಾ ರಾಜೇ ಅರಸ್, ಪಿಯುಸಿಯಲ್ಲಿ ಐಶ್ವರ್ಯ, ಸ್ವಯಂ ಸೇವೆಯಲ್ಲಿ ರಘು, ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜಶೇಖರ್ ಮೂರ್ತಿ ಸೇರಿದಂತೆ ಇತರರಿಗೆ ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, ಬ್ರೈನ್ ಕೆನ್, ಹೇರ್ ಬೆಡ್, ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.