ಕಲಬುರಗಿ: ರಾಜ್ಯದಲ್ಲಿ ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ೬೮೦ ಕಾರ್ಯಕರ್ತರ ವೇತನ ಕಡಿತಗೊಳಿಸಿರುವುದನ್ನು ಖಂಡಿಸಿ ನವ ಕರ್ನಾಟಕ ಎಂಆರ್‌ಡಬ್ಲುÈ, ವಿಆರ್‌ಡಬ್ಲುÈ, ಯುಆರ್‌ಡಬ್ಲುÈ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ ಮಾತನಾಡಿ, ಗ್ರಾಮ, ತಾಲೂಕು ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನ ಪುನರ್ವಸತಿ ಕಾರ್ಯಕರ್ತರ ಗೌರವಧನ ಇ-ಹಾಜರಾತಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಕಡಿತಗೊಳಿಸಲಾಗಿದೆ. ಹಾಸನ ಸೇರಿ ವಿವಿಧ ಜಿಲ್ಲೆಗಳಲ್ಲಿ ಇ-ಹಾಜರಾತಿಯಲ್ಲಿ ಆಗಿರುವ ವಿಳಂಬಕ್ಕಾಗಿ ಕಡಿತಗೊಳಿಸಿರುವ ಜುಲೈ, ಆಗಸ್ಟ್, ಸೆಪ್ಟೆಂಬರ್ ಗೌರವಧನ ತಕ್ಷಣ ಪಾವತಿಸಬೇಕು. ಶಿವಮೊಗ್ಗ ಸೇರಿ ಇತರೆ ಜಿಲ್ಲೆಗಳಲ್ಲಿ ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರಿಗೆ ಗ್ರಾಪಂ ಕಚೇರಿಯ ಇತರೆ ಕೆಲಸ ನಿರ್ವಹಿಸುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಪ್ರಮುಖರಾದ ವೆಂಕಟಪ್ಪ ಚವ್ಹಾಣ್, ಖಾಸೀಂಸಾಬ್, ಮಹೇಶ ಕುಲಕರ್ಣಿ, ಮಲ್ಲಿಕಾರ್ಜುನ ಕಟ್ಟಿಮನಿ, ನಾನಾಗೌಡ ಹೊನ್ನಳ್ಳಿ ಇತರರಿದ್ದರು.