ಜಿಲ್ಲೆ

ಅಂಗಮಾರಿ ರೋಗಕ್ಕೆ ಔಷಧ ಸಿಂಪಡಿಸಿ

ಜಂಟಿ ಕೃಷಿ ನಿರ್ದೇಶಕ ಡಾ.ಮಹಂತೇಶಪ್ಪ  ಸಲಹೆ

ಮೈಸೂರು: ಕೆ.ಆರ್.ನಗರ, ತಿ.ನರಸೀಪುರ, ನಂಜನಗೂಡು ಮತ್ತು ಮೈಸೂರು ತಾಲೂಕಿನ ಕೆಲವು ಭಾಗಗಳಲ್ಲಿ ಭತ್ತದ ಬೆಳೆಗೆ ಹಳದಿ ಕಾಂಡಕೊರಕ, ಗರಿ ಸುತ್ತುವ ಹುಳು, ಬೆಂಕಿ ರೋಗ ಮತ್ತು ದುಂಡಾಣು ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ಔಷಧ ಸಿಂಪಡಣೆ ಮಾಡುವಂತೆ ಜಂಟಿ ಕೃಷಿ ನಿರ್ದೇಶಕ ಡಾ.ಮಹಂತೇಶಪ್ಪ ತಿಳಿಸಿದ್ದಾರೆ.
ಕಾಂಡಕೊರಕ ಹುಳು ಇದ್ದಲ್ಲಿ, ಬೆಳವಣಿಗೆ ಹಂತದಲ್ಲಿ ಸುಳಿ ಒಣಗುವುದು. ತೆನೆ ಬರುವ ಹಂತದಲ್ಲಿ ಮತ್ತು ಬಂದ ನಂತರ ಬಿಳಿ ತೆನೆ, ಜಳ್ಳು ತೆನೆ ಕಂಡು ಬರುತ್ತದೆ. ಇದರ ನಿರ್ವಹಣೆಗೆ ಪ್ರತಿ ಲೀಟರ್ ನೀರಿಗೆ ಕ್ಲೋರೋಪೈರಿಫಾಸ್ 20ಇಸಿ 2.5 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಎಕರೆಗೆ 200-250 ಲೀ ದ್ರಾವಣ ಉಪಯೋಗಿಸಬೇಕು.
ಗರಿ ಮಡಚುವ(ಸುತ್ತುವ) ಹುಳು ಇದ್ದಲ್ಲಿ ಗರಿಗಳ ಅಂಚು ಒಳಭಾಗಕ್ಕೆ ಸುರುಳಿ ಸುತ್ತಿಕೊಂಡಿರುವುದರ ಜತೆಗೆ ಎರಡು-ಮೂರು ಗರಿಗಳು ಕುಣಿಕೆ ಆಕಾರದಲ್ಲಿ ಹೆಣೆದಿರುವುದು ಕಂಡುಬರುತ್ತವೆ. ಇದರ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ ಕ್ವಿನಾಲ್ ಫಾಸ್ 20ಇಸಿ 2 ಮಿ.ಲೀ ಅಥವಾ ಇಂಡಾಕ್ಸಿಕಾರ್ಬ್ 14.5ಇಸಿ 0.5 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಒಂದು ಎಕರೆಗೆ 250 ರಿಂದ 300 ಲೀ ದ್ರಾವಣ ಸಿಂಪಡಿಸುವುದು ಸೂಕ್ತ.
ಬೆಂಕಿ ಅಥವಾ ಕುತ್ತಿಗೆ ರೋಗ ಇದ್ದಲ್ಲಿ ಬೆಳವಣಿಗೆ ಹಂತದಲ್ಲಿ ಗರಿಗಳ ಮೇಲೆ ವಜ್ರದಾಕಾರದ ಕಂದು ಚುಕ್ಕಿ ಕಂಡು ಬರುವುದರ ಜತೆಗೆ ಮಧ್ಯಭಾಗ ಬೂದಿ ಬಣ್ಣ ಕಾಣುತ್ತದೆ. ತೆನೆಹೊರ ಬಂದಾಗ ಅದರ ಕುತ್ತಿಗೆ ಭಾಗದಲ್ಲಿ ಕಪ್ಪು ಮಚ್ಚೆ ಕಂಡು ಬಂದು ಕಾಳು ಒಣಗಿ ಜೊಳ್ಳಾಗಿರುತ್ತದೆ.ಇದರ ನಿವಾರಣೆಗಾಗಿ ಪ್ರತಿ ಲೀಟರ್ ನೀರಿಗೆ ಟ್ರೈಸೈಕ್ಲೋಜೋಲ್ ಅನ್ನು ಸೇರಿಸಿ ಅಗತ್ಯಕ್ಕೆ ತಕ್ಕಂತೆ ಬೆಳವಣಿಗೆ ಹಂತ ಅಥವಾ ತೆನೆ ಬರುವ ಪೂರ್ವದಲ್ಲಿ (ಹೂ ಬಿಡುವ ಹಂತ) ಸಿಂಪಡಿಸಬೇಕು.
ದುಂಡಾಣು ಅಂಗಮಾರಿ ರೋಗ ಕಂಡುಬಂದಲ್ಲಿ ತೆನೆಯ ಅಂಚಿನ ಗರಿಗಳು ಒಣಗಿದಂತಾಗಿ ತುದಿ ಬಾಗಿರುವುದರ ಜತೆಗೆ ಗರಿಗಳ ಅಂಚಿನಲ್ಲಿ ಉದ್ದನೆಯ ಒಣಗಿದ ಪಟ್ಟಿಗಳು ಕಂಡು ಬರುತ್ತದೆ. ಇದರ ನಿರ್ವಹಣೆಗಾಗಿ ಬೆಳವಣಿಗೆ ಮತ್ತು ಕಾಳು ಕಟ್ಟುವ ಸಮಯದಲ್ಲಿ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಸ್ಟ್ರೆಪ್ಟೋಸೈಕ್ಲಿನ್ ಮತ್ತು 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ ಸಿಂಪಡಿಸುವುದು. ಪ್ರತಿ ಎಕೆರೆಗೆ 200 ರಿಂದ 260 ಲೀಟರ್ ದ್ರಾವಣವನ್ನು ಸಿಂಪಡಿಸುವುದು ಉತ್ತಮ.


ಕೊಳವೆ ಹುಳು, ಎಳೆ ಕವಚ ರೋಗ ಮತ್ತು ಊದುಬತ್ತಿ ರೋಗವೂ ಅಲ್ಲಲ್ಲಿ ಕಂಡು ಬಂದಿದ್ದು, ಇವುಗಳ ನಿರ್ವಹಣೆಗಾಗಿ ಮತ್ತು ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಘಟಕ,  ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ಸಲಹೆ ಪಡೆದು ಅಗತ್ಯಕ್ಕನುಗುಣವಾಗಿ ಕೀಟನಾಶಕಗಳ ಸಿಂಪಡಣೆ ಕೈಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.