ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಮಕ್ಕಳ ಪ್ರಾಥಮಿಕ ಶಿಕ್ಷಣ ಕಲಿಕೆಯ ಬುನಾದಿಗೆ ಪೂರಕವಾಗಿರುವ ಅಂಗನವಾಡಿಗಳ ಮೂಲ ಸೌಕರ್ಯಕ್ಕೆ ಅಧಿಕಾರಿಗಳು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
ದೊಡ್ಡ ಬಳ್ಳಾಪುರ ತಾಲೂಕಿನ ತಿಮ್ಮಸಂದ್ರದಲ್ಲಿ ಶನಿವಾರ ಎಜಾಕ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಿರುವ ವಿಶೇಷ ವಿನ್ಯಾಸದ ಗೋಲ್ಗುಂಬಜ್ ಮಾದರಿಯ ಅಂಗನವಾಡಿ ಕಟ್ಟಡ ಹಾಗೂ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಈ ಮಾದರಿಯ ಅಂಗನವಾಡಿ ನೂತನ ಕಟ್ಟಡ ವಿಶೇಷವಾಗಿದ್ದು, ವಿನೂತನವಾದ ಡೂಮ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಕಟ್ಟಡದ ಒಳಗೆ ಆಹ್ಲಾದಕರ ವಾತಾವರಣದಿಂದ ಕೂಡಿದ್ದು, ಮಕ್ಕಳು ಕಲಿಯಲು ಪೂರಕವಾದ ವಾತಾವರಣ ಕಲ್ಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಏಜಾಕ್ಸ್ ಕಂಪನಿಯು ಸಾಮಾಜಿಕವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಶಾಲೆಯ ಕೊಠಡಿ ನಿರ್ಮಾಣವೂ ಗುಣಮಟ್ಟದಿಂದ ಕೂಡಿದೆ ಎಂದರು.
ಕಂಪನಿ ನೀಡಿರುವ ಈ ಕಟ್ಟಡವನ್ನು ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ನಿರ್ವಹಿಸಿ, ಮತ್ತಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಪಾಡಿಕೊಳ್ಳಬೇಕು. ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಮಾನವೀಯ ಮೌಲ್ಯಗಳನ್ನು ಬಾಲ್ಯದಲ್ಲೇ ಕಲಿಸಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಕಾಳಜಿ ಶ್ಲಾಘನೀಯ: ಏಜಾಕ್ಸ್ ಕಂಪನಿಯ ಸಾಮಾಜಿಕ ಕಾಳಜಿಯಿಂದ ನೂತನ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯವಾಗಿದೆ ಎಂದು ತಹಸೀಲ್ದಾರ್ ಮೋಹನ್‌ಕುಮಾರಿ ಹೇಳಿದರು. ಈ ಕಂಪನಿ ಆಸ್ಪತ್ರೆ ಸೇರಿ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಬದ್ಧತೆ ತೋರಿಸಿದೆ, ಈ ಸಾಮಾಜಿಕ ಕಾರ್ಯಕ್ರಮಗಳು ಹೀಗೆ ಮುಂದುವರಿಯಲಿ ಎಂದು ಆಶಿಸಿದರು. ಜಿಲ್ಲೆಯಲ್ಲಿ ಗೋಲಗುಂಬಜ್ ಮಾದರಿಯ ವಿನೂತನ ಕಟ್ಟಡ ನಿರ್ಮಾಣವಾಗಿದ್ದು, ಎಲ್ಲ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ, ಇಂಥ ಅಂಗನವಾಡಿಗಳ ನಿರ್ಮಾಣಕ್ಕೆ ಇತರ ತಾಲೂಕುಗಳಿಂದಲೂ ಬೇಡಿಕೆ ಬರುತ್ತಿದೆ, ಇಡೀ ಜಿಲ್ಲೆಯಲ್ಲಿ ಇದು ಆಕರ್ಷಣೀಯ ಕೇಂದ್ರಬಿಂದುವಾಗಿದೆ ಎಂದು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಟರಾಜ್ ಹೇಳಿದರು. ಸಿಡಿಪಿಒ ಅನಿತಾಕುಮಾರಿ, ಎಜಾಕ್ಸ್ ಕಂಪನಿ ಅಧಿಕಾರಿ ಗಣಪತಿ, ಮಂಜುನಾಥ್ ಮತ್ತಿತರರಿದ್ದರು.