ಮೈಸೂರು: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೇಟಿ ಬಚಾವೋ ಬೇಟಿ ಪಡಾವೋ’ ಮತ್ತು ‘ಮಿಂಚಿನ ಸಂಚಾರ - ಅಂಗನವಾಡಿ ಕೇಂದ್ರಗಳಿಗೆ ಸಮರೋಪಾದಿ ಭೇಟಿ’ ಕಾರ್ಯಕ್ರಮವನ್ನು ವರುಣ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.
ಇಲಾಖೆಯ ಉಪನಿರ್ದೇಶಕ ಬಿ.ಬಸವರಾಜು ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಎಲ್ಲ ಸಿಡಿಪಿಒಗಳು ಎಸಿಡಿಪಿಒಗಳು, ಹಿರಿಯ ಮೇಲ್ವಿಚಾರಕರು ಮತ್ತು ಮೇಲ್ವಿಚಾರಕರು ಇಡೀ ದಿನ ಮೈಸೂರು ಗ್ರಾಮಾಂತರ ಯೋಜನೆಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಅವುಗಳು ಇಲಾಖೆಯ ನಿಯಮದಂತೆ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ತಪಾಷಣೆ ನಡೆಸಿ, ಫಲಾನುಭವಿಗಳನ್ನು ಭೇಟಿ ಮಾಡಿ, ಸಂಜೆ ವರದಿ ನೀಡುವರು.
ಸದರಿ ವರದಿಯಲ್ಲಿ ನ್ಯೂನತೆ ಕಂಡು ಬಂದರೆ ಸರಿಪಡಿಸಲು ತುರ್ತು ಕ್ರಮ ವಹಿಸಲಾಗುವುದು. ಅಲ್ಲದೆ ವರದಿಯಲ್ಲಿ ಉತ್ತಮ ಅಂಶಗಳು ಕಂಡುಬಂದರೆ ಅದನ್ನು ಇತರ ಯೋಜನೆಗಳಲ್ಲೂ ಅನುಸರಿಸಲು ಸೂಚಿಸಲಾಗುವುದು. ಈ ಕಾರ್ಯಕ್ರಮ ಹಂತ ಹಂತವಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ನಡೆಯುತ್ತದೆ ಎಂದು ತಿಳಿಸಿದರು.
ಮೈಸೂರು ತಾಪಂ ಇಒ ಕೃಷ್ಣ ಮಾತನಾಡಿ, ಆಂತರಿಕ ತಪಾಸಣೆಯಂತೆ ಈ ತರಹದ ಕಾರ್ಯಕ್ರಮದಿಂದ ಫಲಾನುಭವಿಗಳಿಗೆ ಸಕಾಲಕ್ಕೆ ಪರಿಣಾಮಕಾರಿಯಾಗಿ ಇಲಾಖೆಯ ಸೌಲಭ್ಯ ದೊರಕಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನ ಪೋಸ್ಟರ್ ಬಿಡುಗಡೆ ಮಾಡಲಾಯಿತು. ವರುಣ ಹೋಬಳಿಯಲ್ಲಿ ಬಾಲ್ಯ ವಿವಾಹ ತಡೆಯಲು ಕೈಗೊಂಡ ಕ್ರಮದ ವರದಿ ಬಿಡುಗಡೆಗೊಳಿಸಲಾಯಿತು. ಗೃಹಲಕ್ಷ್ಮಿ ಯೋಜನೆ ಪಡೆದು ಸ್ವಉದ್ಯೋಗ ಮಾಡುತ್ತಿರುವ ಫಲಾನುಭವಿಯು ಯೋಜನೆ ಕುರಿತು ಮೆಚ್ಚುಗೆಯ ಮಾತನಾಡಿದರು. ಬೇಟಿ ಪಡಾವೋ, ಬೇಟಿ ಬಚಾವೋ ಕಾರ್ಯಕ್ರಮದ ಬಗ್ಗೆ ಜಾಥಾ ನಡೆಸಲಾಯಿತು.