ಎನ್.ಆರ್.ಪುರ: ಪ್ರತಿ ಅಂಗನವಾಡಿಯಲ್ಲೂ ಶೌಚಗೃಹವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾ ಭಾನು ಹೇಳಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿ ಅಂಗನವಾಡಿಯಲ್ಲಿ ವಿಶ್ವ ಶೌಚಗೃಹ ದಿನಾಚರಣೆ ಅಂಗವಾಗಿ ನಮ್ಮ ಶೌಚಗೃಹ, ನಮ್ಮ ಗೌರವ ಘೋಷಣೆಯಡಿ ನವೀಕರಿಸಿದ ಶೌಚಗೃಹ ಉದ್ಘಾಟಿಸಿ ಮಾತನಾಡಿ, ಹೌಸಿಂಗ್ ಬೋರ್ಡ್ ಕಾಲನಿ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಇನ್ನೊಂದು ಕೊಠಡಿ ಅಗತ್ಯವಿದೆ. ಈ ಅಂಗನವಾಡಿಯಲ್ಲಿ ಸ್ವಚ್ಛತೆ, ಕೈ ತೋಟದ ನಿರ್ವಹಣೆ ಚೆನ್ನಾಗಿದೆ. ಅಂಗನವಾಡಿಗೆ ಗರ್ಭಿಣಿಯರು, ಬಾಣಂತಿಯರಿಗೆ ಎಲ್ಲ ಸೌಲಭ್ಯ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೌಸಿಂಗ್ ಬೋರ್ಡ್ ಕಾಲನಿ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಮಾತನಾಡಿ, ಅಂಗನವಾಡಿ ಸಹಾಯಕಿ ನಿರ್ಮಲಾ ಅವರು ಅಂಗನವಾಡಿಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆ. ಕೈತೋಟದ ನಿರ್ವಹಣೆ, ಅಡುಗೆಯನ್ನೂ ಚೆನ್ನಾಗಿ ಮಾಡುತ್ತಾರೆ ಎಂದರು. ಪಾಲಕರು ಅಂಗನವಾಡಿ ಸಹಾಯಕಿ ನಿರ್ಮಲಾ ಅವರನ್ನು ಸನ್ಮಾನಿಸಿದರು.