ಜಿಲ್ಲೆ

ಅಂಗನವಾಡಿ ಶಿಕ್ಷಕಿಯರಿಗೆ ಪ್ರಮೋಷನ್!

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಖಾಸಗಿ ಪ್ಲೇಹೋಂಗಳ ಪೈಪೋಟಿ ನಡುವೆಯೂ ಪುಟಾಣಿಗಳ ಪ್ರಾಥಮಿಕ ಪೂರ್ವ ಶಿಕ್ಷಣ ನೀಡುವಲ್ಲಿ ಅವಿರತ ಶ್ರಮಿಸುತ್ತಿರುವ ಸರ್ಕಾರಿ ಅಂಗನವಾಡಿ ಕೇಂದ್ರಗಳಲ್ಲಿನ ಶಿಕ್ಷಕಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಹಿ ಸುದ್ದಿ ನೀಡಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಮಿನಿ ಅಂಗವನಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ ರೆಗ್ಯುಲರ್ ಅಂಗನವಾಡಿಗಳಿಗೆ ಬಡ್ತಿ ನೀಡಲು ಶಿಕ್ಷಕಿಯರ ಪಟ್ಟಿ ಸಿದ್ದಗೊಳ್ಳುತ್ತಿದೆ.

ಜಿಲ್ಲೆಯಲ್ಲಿ 1277 ಅಂಗನವಾಡಿ ಕೇಂದ್ರಗಳಿದ್ದು, 999 ಸ್ವಂತ ಅಂಗನವಾಡಿ ಕಟ್ಟಡಗಳು, 4 ಪಂಚಾಯಿತಿ ಕಟ್ಟಡಗಳಲ್ಲಿ, 50 ಅಂಗನವಾಡಿಗಳು ಸಮುದಾಯ ಭವನದಲ್ಲಿ, 88 ಅಂಗನವಾಡಿಗಳು ಶಾಲೆಗಳಲ್ಲಿ ಹಾಗೂ 132 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಸುಮಾರು 65 ಮಿನಿ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರು ಬಡ್ತಿ ಕೋರಿ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ಇಲಾಖೆಯ ಕೆಲವೊಂದು ಮಾನದಂಡಗಳ ಆಧಾರದ ಮೇಲೆ ಇಲಾಖೆ ಬಡ್ತಿ ನೀಡುವ ಪ್ರಕ್ರಿಯೆ ನಡೆಸುತ್ತಿದೆ.

3ರಿಂದ ಮೂರುವರೆ ಸಾವಿರ ಹೆಚ್ಚಳ:

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಿನಿ ಅಂಗನವಾಡಿ ಶಿಕ್ಷಕಿಯರ ವೇತನ ಇನ್ನಿತರ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರಿಗಿಂತ ಕಡಿಮೆ ಇದೆ, ಬಡ್ತಿ ಸಿಕ್ಕರೆ 3 ರಿಂದ ಮೂರುವರೆ ಸಾವಿರ ರೂಪಾಯಿ ಹೆಚ್ಚುವರಿಯಾಗಿ ಶಿಕ್ಷಕಿಯರಿಗೆ ವೇತನ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಗಾವಣೆಗೂ ಅರ್ಜಿ:

ಮಿನಿ ಅಂಗನವಾಡಿ ಶಿಕ್ಷಕಿಯರ ಬಡ್ತಿ ಜತೆಗೆ ಬೇರೆ ಕಡೆಗಳಿಗೆ ವರ್ಗಾವಣೆ ಕೋರಿಯೂ ಹಲವರು ಇಲಾಖೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಶಿಕ್ಷಕಿಯರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗನವಾಡಿಗಳಿಗೆ ಅರ್ಜಿ:

ಎಲ್ಲ ಅಂದುಕೊಂಡಂತೆ ನಡೆದರೆ ಮಿನಿ ಅಂಗನವಾಡಿಯಿಂದ ರೆಗ್ಯುಲರ್ ಅಂಗನವಾಡಿಗಳಿಗೆ ಶಿಕ್ಷಕಿಯರು ಬಡ್ತಿ ಪಡೆದ ನಂತರ ತೆರವಾಗುವ ಹುದ್ದೆಗಳಿಗೆ ಇಲಾಖೆಯಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ನಡೆಯಲಿದೆ. ಇದರೊಳಗೆ ವರ್ಗಾವಣೆಗೂ ಅವಕಾಶವಿದೆ. ಈ ಪ್ರಕ್ರಿಯೆಯಿಂದ ಮತ್ತಷ್ಟು ಶಿಕ್ಷಕಿಯರಿಗೆ ಉದ್ಯೋಗಭಾಗ್ಯ ಲಭಿಸಲಿದೆ.

 ಮೂರು ತಿಂಗಳ ಬಾಕಿ ಚುಕ್ತಾ:

ಕಳೆದ ಕೆಲವು ತಿಂಗಳಿಂದ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯರಿಗೆ ವೇತನ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇಲಾಖೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದರು. ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಜೂನ್‌ನಿಂದ ಆಗಸ್ಟ್‌ವರೆಗೆ ಬಾಕಿ ಇದ್ದ ವೇತನವನ್ನು ಸಂದಾಯ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 3ರಿಂದ 6 ವರ್ಷ ವಯೋಮಾನದ ಪುಟಾಣಿಗಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅಂಗನವಾಡಿ ಸಿಬ್ಬಂದಿ ಇದರಿಂದ ನಿರಾಳವಾಗಿದೆ.

---

 ಮೊಟ್ಟೆಯ ಕಥೆ:

ಅಂಗನವಾಡಿಗಳಲ್ಲಿ ಮಕ್ಕಳ ಪೌಷ್ಟಿಕತೆಗಾಗಿ ವಿತರಿಸುತ್ತಿರುವ ಮೊಟ್ಟೆಗಳ ವಿಚಾರವಿನ್ನೂ ಗೊಂದಲದಲ್ಲೇ ಇದೆ ಎನ್ನಲಾಗಿದೆ. ಸರ್ಕಾರ ನೀಡುತ್ತಿರುವ ಅನುದಾನಕ್ಕೂ ಮೊಟ್ಟೆಯ ದರಕ್ಕೂ ವ್ಯತ್ಯಾಸವಿರುವುದರಿಂದ ಅಂಗನವಾಡಿ ಶಿಕ್ಷಕಿಯರು ಸಂಕಷ್ಟ ಎದುರಿಸುವಂತಾಗಿದೆ. ಹಲವು ಸಂದರ್ಭಗಳಲ್ಲಿ ಸಿಬ್ಬಂದಿಯೇ ಮೊಟ್ಟೆಗೆ ಹೆಚ್ಚುವರಿ ಹಣ ಪಾವತಿಸುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಕಳೆದೆರಡು ತಿಂಗಳಿಂದ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರಿಗೆ ವೇತನ ಪಾವತಿಯಾಗುವುದು ತಡವಾಗಿತ್ತು. ಇದೀಗ ಆಗಸ್ಟ್‌ವರೆಗಿನ ವೇತನವನ್ನು ಸಂಪೂರ್ಣ ಪಾವತಿಸಲಾಗಿದೆ. ಇದರ ಜತೆಗೆ ಬಡ್ತಿ ಕೋರಿ ಮಿನಿ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರ ಅರ್ಜಿಯನ್ನು ಪರಿಶೀಲಿಸುತ್ತಿದ್ದು ಶೀಘ್ರದಲ್ಲೇ ಬಡ್ತಿ ನೀಡುವ ಪ್ರಕ್ರಿಯೆ ನಡೆಯಲಿದೆ.

ಮುದ್ದಣ್ಣ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂ.ಗ್ರಾಮಾಂತರ