ಜಿಲ್ಲೆ

ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಿಸಿ

ಕೋಲಾರ: ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಳ, ಕೇಂದ್ರದ ಫಲಾನುಭವಿಗಳಿಗೆ ವಿತರಿಸಲು ಗುಣಮಟ್ಟದ ಆಹಾರ ಪದಾರ್ಥ ಸರಬರಾಜಿಗೆ ಕ್ರಮ ಕೈಗೊಳ್ಳಬೇಕೆಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿಯಿಂದ ಜಿಪಂ ಕಾರ್ಯಾಲಯದ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸಮಿತಿ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಿಸಿದ್ದು ಬಿಟ್ಟರೆ ನಂತರದ ಸರ್ಕಾರಗಳು ಗೌರವಧನ ಹೆಚ್ಚಿಸದೆ ಅಲ್ಪ ಗೌರವಧನದಲ್ಲಿ ದುಡಿಸಿಕೊಳ್ಳುತ್ತಿವೆ. ಈಗಿನ ಬೆಲೆ ಏರಿಕೆಗೆ ತಕ್ಕಂತೆ ಗೌರವಧನ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು, ಹಲವು ವರ್ಷಗಳಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ ಕೋಲಾರದ ಮೇಲ್ವಿಚಾರಕಿಯರಾದ ಶಾಂತ ಬಂಡಾರಿ ಹಾಗೂ ತಾರಕೇಶ್ವರಿ ಅವರನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಭಾಗ್ಯಲಕ್ಷ್ಮೀ ಹಾಗೂ ಮಾತೃವಂದನ ಯೋಜನೆಗಳಲ್ಲಿ ಎರಡು ವರ್ಷಗಳಿಂದ ಬಾಕಿ ಇರುವ 250 ರೂ. ಪ್ರೋತ್ಸಾಹ ಧನ ನೀಡಬೇಕು, ಕೋಲಾರದ ಕಮ್ಮಸಂದ್ರ ಅಂಗನವಾಡಿ ಸಹಾಯಕಿಗೆ ವೀರಾಪುರ ಗ್ರಾಮದಲ್ಲಿ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗೆ ಬಡ್ತಿ ನೀಡಿರುವುದು ಕೇಂದ್ರ ಕಚೇರಿಯ ಆದೇಶ ಉಲ್ಲಂಘನೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಕಿ ಎಂ.ಜಿ.ಪಾಲಿ, ಕೋಲಾರ ಸಿಡಿಪಿಒ ರಮೇಶ್ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳ ಸಂಬಂಧ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಅಂಗನವಾಡಿ ಸಮಿತಿಗಳ ಪದಾಧಿಕಾರಿಗಳ ಸಮನ್ವಯ ಸಮಿತಿ ರಚಿಸಿ ಸಭೆಗೆ ದಿನಾಂಕ ಗೊತ್ತುಪಡಿಸುವುದಾಗಿ ಭರವಸೆ ನೀಡಿದರು.

ಪಿಎಸ್‌ಎಸ್ ಅಧ್ಯಕ್ಷ ನರಸಾಪುರ ಎಸ್.ನಾರಾಯಣಸ್ವಾಮಿ, ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಕೋಲಾರ ತಾ. ಅಧ್ಯಕ್ಷ ಜಗನ್ನಾಥರೆಡ್ಡಿ, ಅಂಗನವಾಡಿ ಸಮಿತಿ ಮುಖಂಡರಾದ ನಾಗವೇಣಮ್ಮ, ವಿ.ಜಮುನಾರಾಣಿ, ಡಿ.ಎನ್.ಗಂಗರತ್ನಮ್ಮ, ಕೆ.ಎಚ್.ಮಂಜುಳಾ, ಮುನಿಯಮ್ಮ, ಶೋಭಾರಾಣಿ, ಸರಸ್ವತಮ್ಮ ಇತರರಿದ್ದರು.