ಜಿಲ್ಲೆ

ಅಂಗನವಾಡಿ ನೌಕರರ ಪ್ರತಿಭಟನೆ

ಹಾಸನ : ಸಮೀಕ್ಷೆ ಸೇರಿ ಇತರೆ ಕೆಸಲಗಳಿಗಾಗಿ ನೀಡಲಾಗಿರುವ ಮೊಬೈಲ್‌ಗಳು, ಇವುಗಳಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಳೆಯ ಮೊಬೈಲ್‌ಗಳನ್ನು ಪಡೆದುಕೊಂಡು ಹೊಸದಾಗಿ ಟ್ಯಾಬ್ಲೇಟ್ ನೀಡಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನೆ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಸಿಡಿಪಿಐ ಕಚೇರಿ ಆವರಣಕ್ಕೆ ಬಂದರು. ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆಗೆ ಸಂಬಂಧಿಸಿ ಅಂಗನವಾಡಿ ನೌಕರರ ಮೇಲೆ ಹೆಚ್ಚಿನ ಒತ್ತಡವನ್ನು ತರಲಾಗುತ್ತಿದೆ. ಈ ಸಮೀಕ್ಷೆ ನಡೆಸಲು ಹಲವಾರು ಪ್ರಾಯೋಗಿಕ ಸಮಸ್ಯೆಗಳಿವೆ. ಯಾವುದೇ ಎಲೆಕ್ಟ್ರಾನಿಕ್ ವಸ್ತುವಿಗೆ 2 ವರ್ಷ ಮಾತ್ರ ಗ್ಯಾರಂಟಿಯಿರುತ್ತದೆ. ಅಂಗನವಾಡಿ ನೌಕರರಿಗೆ ಕೊಟ್ಟಿರುವ ಮೊಬೈಲ್‌ಗಳು 4 ವರ್ಷದ ಹಿಂದೆ ನೀಡಿದ್ದವು. ಈ ಹಳೆ ಮೊಬೈಲ್‌ಗಳಲ್ಲಿ ಮೆಮೋರಿ ಸಾಮರ್ಥ್ಯ ಕಡಿಮೆಯಿರುವುದರಿಂದ ಹೊಸ ಆಫ್‌ಗಳನ್ನು ಡೌನ್‌ಲೋಡ್ ಮಾಡಲು ಆಗುವುದಿಲ್ಲ. ಈಗಾಗಲೇ ದಿನನಿತ್ಯ ಪೋಷಣ್ ಅಭಿಯಾನ, ಪೋಷಣ್ ಟ್ರ್ಯಾಕರ್ ಅಡಿಯಲ್ಲಿ ದಿನನಿತ್ಯ ಮಕ್ಕಳ ಮತ್ತು ಪೋಷಕರ ಹಾಜರಾತಿ, ಆಹಾರ ವಿತರಣೆ, ಶಾಲಾಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಮೊಬೈಲ್ ಫೋನ್‌ಗಳು ಹ್ಯಾಂಗ್ ಆಗಿವೆ. ಈಗಿರುವ ಮೊಬೈಲ್‌ಗಳಲ್ಲಿ ಈ ಸರ್ವೆ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

ಇದು ಆರೋಗ್ಯ ಇಲಾಖೆಯವರು ಮಾಡಬೇಕಾದ ಸರ್ವೆ. ನಮಗೆ ಹೆಚ್ಚುವತಿ ಕೆಲಸ ನೀಡಬೇಡಿ ಎಂದು ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಪ್ರತಿ ಬಾರಿಯೂ ಹೆಚ್ಚುವರಿ ಕೆಲಸಗಳನ್ನು ನಮ್ಮ ಮೇಲೆ ಹೇರುತ್ತಲೇ ಬರಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಮಕ್ಕಳ ಮತ್ತು ಮಹಿಳೆಯರ ಅನಿಮಿಯಾ ಹೆಚ್ಚುತ್ತಿದೆ ಎಂಬ ವರದಿಗಳಿವೆ. ಅಂಗನವಾಡಿ ನೌಕರರು ಪ್ರತಿನಿತ್ಯ ಈ ಕೆಲಸಗಳಲ್ಲಿ ತೊಡಗಿಸಿ ಕೊಳ್ಳವುದು ಮುಖ್ಯ. ಆದರೆ ಈ ರೀತಿಯ ಹೆಚ್ಚುವರಿ ಕೆಲಸಗಳಿಂದ ಮೂಲ ಕೆಲಸಕ್ಕೆ ಧಕ್ಕೆಯಾಗುತ್ತಿದೆ. ಈ ಸಮೀಕ್ಷೆಯಲ್ಲಿ ಕುಟುಂಬದ ವ್ಯಕ್ತಿಗಳ ವೈಯಕ್ತಿಕ ವಿಚಾರಗಳನ್ನು ಕೇಳಬೇಕಾದ್ದರಿಂದ ಇದು ವ್ಯತಿರಿಕ್ತ ಪರಿಣಾಮ ಬೀರುವುದು ಮಾತ್ರವಲ್ಲದೆ ಒಂದು ಮನೆಗೆ ಕನಿಷ್ಠ 1 ಗಂಟೆ ಸಮಯ ತಗೆದುಕೊಳ್ಳುತ್ತದೆ. ಕನಿಷ್ಠ ಒಂದು ಅಂಗನವಾಡಿ ಕೇಂದ್ರಕ್ಕೆ 100 ರಿಂದ 150 ಮನೆಗಳಿವೆ. ಈ ಕಾರ್ಯ ಮಾಡಲು ಕನಿಷ್ಠ 3 ವಾರ ಬೇಕಾಗುತ್ತದೆ. ಈ ಸಮೀಕ್ಷೆ ಮಾಡಲೇಬೇಕು ಎನ್ನುವುದಾದರೆ 3 ವಾರ ಅಂಗನವಾಡಿ ಕೆಲಸದಿಂದ ವಿನಾಯ್ತಿ ಕೊಡಬೇಕು ಎಂದು ಕೋರಿದರು.

2023 ಏಪ್ರಿಲ್ ಬಜೆಟ್‌ನಲ್ಲಿ ಘೋಷಿಸಲಾದ 1000 ರೂ. ಗೌರವಧನವನ್ನು ಕೂಡಲೇ ಪಾವತಿಸಬೇಕು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಕೊಡುತ್ತಿರುವ ಪುಷ್ಠಿ ಮತ್ತು ಫಾಮೈಲ್ ಎಣ್ಣೆಯನ್ನು ಬದಲಾಯಿಸಿ, ಗುಣಮಟ್ಟದ ಆಹಾರ ಪದಾರ್ಥಗಳು, ಹಾಗೂ ಗುಣಮಟ್ಟದ ಕೋಳಿ ಮೊಟ್ಟೆ ಸರಬರಾಜು ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷೆ ಇಂದ್ರಮ್ಮ, ಜಿಲ್ಲಾಧ್ಯಕ್ಷೆ ಎಂ.ಬಿ. ಪುಷ್ಪಾ, ಖಜಾಂಚಿ ಜಿ.ಪಿ. ಶೈಲಜಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಮಂಜುಳಾ, ಉಪಾಧ್ಯಕ್ಷೆ ಶಾರದಾ, ಕಾಮಾಕ್ಷಿರಾಜು, ಎಚ್.ಟಿ. ಮೀನಾಕ್ಷಿ, ಕಾರ್ಯದರ್ಶಿ ಟಿ.ಎಚ್. ಜಯಂತಿ, ಕೆ.ಪಿ. ವೀಣಾ, ಸುಮಿತ್ರಾ, ವೀಣಾ ಇತರರು ಉಪಸ್ಥಿತರಿದ್ದರು.