ಬೀದರ್: ಇನ್ನಷ್ಟು ಸರಳ, ಪಾರದರ್ಶಕತೆಯೊಂದಿಗೆ ಅಂಗನವಾಡಿ ನೇಮಕಾತಿ ಪ್ರಕ್ರಿಯೆ ಗರಿಷ್ಠ ಮೂರು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಯಾವ ಕಾರಣಕ್ಕೂ ನೇಮಕಾತಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಪ್ರಕ್ರಿಯೆಯಲ್ಲಿ ಸಮಸ್ಯೆ ಕಂಡುಬಂದರೆ ತಕ್ಷಣ ಪರಿಹರಿಸಬೇಕು. ನಮ್ಮದು ಜನರಿಗೆ, ಅವರ ಬದುಕಿಗೆ ಹತ್ತಿರವಾದ ಇಲಾಖೆ. ಅಧಿಕಾರಿಗಳು ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಕೇಂದ್ರ ಹಾಗೂ ರಾಜ್ಯದಿಂದ ಕಾಲಕಾಲಕ್ಕೆ ನೀಡುವ ಗುರಿಯನ್ನು ತಲುಪಲೇಬೇಕು. ಅನೇಕ ಕಡೆ ಮಕ್ಕಳಿಗೆ ಸರಿಯಾಗಿ ಮೊಟ್ಟೆ ತಲುಪುತ್ತಿಲ್ಲ. ಹಾಲಿನ ಪೌಡರ್ ಮಾರಿಕೊಳ್ಳುತ್ತಾರೆ ಎಂಬ ದೂರುಗಳಿವೆ. ಅದು ನಿಜವಾಗಿದ್ದಲ್ಲಿ ಸಹಿಸಲಾಗದು. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಸಚಿವೆ ಹೆಬ್ಬಾಳಕರ್, ಸ್ಥಳೀಯ ಸಚಿವ-ಶಾಸಕರಿಗೆ ಇಲಾಖೆ ಕಾರ್ಯಕ್ರಮ ಮತ್ತು ಪ್ರಗತಿ ವಿವರಗಳನ್ನು ಕಾಲಕಾಲಕ್ಕೆ ಕಡ್ಡಾಯವಾಗಿ ಅಧಿಕಾರಿಗಳು ನೀಡಬೇಕು ಎಂದು ನಿರ್ದೇಶನ ನೀಡಿದರು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಒಳಗೊಂಡ ವಿಭಾಗಕ್ಕೆ ಸಂಬಂಧಿಸಿದಂತೆ ಐಸಿಡಿಎಸ್ ಶಾಖೆಯಲ್ಲಿ ಕೈಗೊಂಡಿರುವ ಪ್ರಗತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಶನಿವಾರವೂ ಸಭೆ ಮುಂದುವರಿಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಮಾತನಾಡಿದರು. ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಇಲಾಖೆ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ನಿರ್ದೇಶಕ ರಾಘವೇಂದ್ರ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್ ಇತರರಿದ್ದರು.
ಲಕ್ಷ್ಮೀ ಹೆಬ್ಬಾಳಕರ್ ಸಿದ್ದರಾಮಯ್ಯ ಸರ್ಕಾರದ ಕ್ರಿಯಾಶೀಲ ಸಚಿವರು. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿಯುತವಾಗಿ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
ಮಹಿಳಾ ಕುಲಕ್ಕೆ ಮಾಡಿದ ಅವಮಾನ: ಬೀದರ್: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿಕೆ ಇಡೀ ಸ್ತ್ರೀಕುಲಕ್ಕೆ ಮಾಡಿದ ಅಪಮಾನ. ಹೆಣ್ಮಕ್ಕಳನ್ನು ಪದೇಪದೆ ಅವಮಾನಿಸುವುದು ಬಿಜೆಪಿಗರ ಚಾಳಿಯಾಗಿದ್ದಲ್ಲದೆ ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ ತತ್ವ ಸಿದ್ಧಾಂತವಾದ ಮನುಸ್ಮೃತಿಯನ್ನು ಎಲ್ಲೆಡೆ ಬಿತ್ತಲು ಹೊರಟಿದ್ದಾರೆ. ಅಚಾನಕ್ ಆಗಿ ಇಂಥ ಮಾತುಗಳು ಬರುವುದಿಲ್ಲ. ಕೆಟ್ಟ ಬಾಯಿ, ಹೊಲಸು ಬಾಯಿ ಏನು ಮಾತಾಡಿದ್ರೂ ಜನ ಕ್ಷಮಿಸ್ತಾರೆ ಅನ್ನೋ ಭಾವನೆ ಅವರಲ್ಲಿ ಇದ್ದಂತಿದೆ ಎಂದು ಹರಿಹಾಯ್ದರು. ರವಿಕುಮಾರ್ ಅವರಿಗೆ ಹೆಣ್ಮಕ್ಕಳ ಬಗ್ಗೆ ಹಗುರ ಮಾತನಾಡುವಂಥ ಕೆಟ್ಟ ಚಾಳಿ ಬಿದ್ದಿದೆ. ನನಗೂ ಇದೇ ರೀತಿ ಸಿ.ಟಿ. ರವಿ ಸದನದಲ್ಲಿ ನಿಂದಿಸಿದ್ದರು. ಇವರಿಗೆ ನೈತಿಕ ಜವಾಬ್ದಾರಿ ಇಲ್ಲ. ಇಂತಹವರು ವಿಧಾನಸಭೆಯಲ್ಲಿ ಇರಕೂಡದು ಎಂದು ಗುಡುಗಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಒಬ್ಬರು ಮಾಸ್ ಲೀಡರ್, ಇನ್ನೊಬ್ಬರು ಸಂಘಟನಾ ಚತುರರು. ಇಬ್ಬರು ಒಟ್ಟಿಗೆ ಸೇರಿ ಕರ್ನಾಟಕದ ಜನತೆಗೆ ಭಾಷೆ ಕೊಟ್ಟಂತೆ ಸರ್ಕಾರ ನಡೆಸುತ್ತಿದ್ದು, ಸರ್ಕಾರ ಸುಭದ್ರವಾಗಿದ್ದು, ಯಾವುದೇ ಗೊಂದಲವಿಲ್ಲ ಎಂದರು.